ಕೊಲ್ಲೂರು, ಜೂ 13 (DaijiworldNews/MS): ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದ ನೂತನ ಶ್ರೀದೇವಿಯ ವಿಗ್ರಹದ ರಚನೆಗೆ ಅಗತ್ಯವಾಗಿರುವ ರಕ್ತಚಂದನ ಮರವನ್ನು ಜೂ.12 ರಂದು ಶಿವಮೊಗ್ಗದಿಂದ ಕೊಲ್ಲೂರು ಮಾರ್ಗವಾಗಿ ಕಟ್ಬೇಲ್ತೂರಿಗೆ ವೈಭವದಿಂದ ತರಲಾಯಿತು.
ಭವ್ಯ ಪುರಾಣ ಇತಿಹಾಸವನ್ನು ಹೊಂದಿರುವ ಕಟ್ಬೇಲ್ತೂರು ಭದ್ರಮಹಾಕಾಳಿ ಅಮ್ಮನವರ ದೈವಸ್ಥಾನದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಮೂಡಿದ ಅಭಿಪ್ರಾಯದಂತೆ ಅಮ್ಮನವರಿಗೆ ರಕ್ತಚಂದನ ಮರದಲ್ಲಿ ನೂತನ ವಿಗ್ರಹ ನಿರ್ಮಾಣ ಮಾಡಿ ಪ್ರತಿಷ್ಠಾಪನೆ ಮಾಡಲು ನಿಶ್ಚಯ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅನುಮತಿಯನ್ನು ಕ್ರಮಬದ್ಧವಾಗಿ ಪಡೆದುಕೊಂಡು ಶಿವಮೊಗ್ಗದ ಅರಣ್ಯ ಇಲಾಖೆಯ ಡಿಫೋದಲ್ಲಿ ಇರಿಸಲಾದ ರಕ್ತ ಚಂದನ ಮರವನ್ನು ಜೂ.12 ರಂದು ದೈವಸ್ಥಾನಕ್ಕೆ ತಂದು ವಿಗ್ರಹ ರಚನೆ ಮಾಡಲಿರುವ ಕೋಟೇಶ್ವರದ ಪ್ರಸಿದ್ಧ ಶಿಲ್ಪಿಗಳಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆ.ಲಕ್ಷ್ಮೀನಾರಾಯಣಆಚಾರ್ಯ ಹಾಗೂ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರಿಗೆ ವಿದ್ಯುಕ್ತವಾಗಿ ಹಸ್ತಾಂತರಿಸಲಾಯಿತು.
ಜೂ.12 ರಂದು ಶುಭ ಮಹೂರ್ತದಲ್ಲಿ ಶಿವಮೊಗ್ಗದಿಂದ ಹೊಸನಗರ, ನಗರ, ಸಂಪೇಕಟ್ಟೆ, ಕೊಲ್ಲೂರು, ಇಡೂರು, ವಂಡ್ಸೆ, ದೇವಲ್ಕುಂದ ಮಾರ್ಗವಾಗಿ ವೈಭವದ ಮೆರವಣಿಗೆಯಲ್ಲಿ ರಕ್ತ ಚಂದನ ಮರವನ್ನು ಕಟ್ಬೇಲ್ತೂರು ದೈವಸ್ಥಾನಕ್ಕೆ ತರಲಾಯಿತು. ಮಾರ್ಗದ ಮಧ್ಯೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಲಾಯಿತು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಠ್ಠಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಆನಂದ ಶೆಟ್ಟಿ, ಮೂರು ಮನೆಯವರು ಹಾಗೂ ಮೂರು ಗ್ರಾಮಸ್ಥರು ಉಪಸ್ಥಿತರಿದ್ದರು