ಸುಳ್ಯ, ಜೂ. 12(DaijiworldNews/AA): ಮಹಿಳೆಯೋರ್ವರ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಜೂನ್ 11ರಂದು ಬಂಧಿಸಿದ್ದಾರೆ.
ಜೋಗಿಯಡ್ಕದ ಜಯರಾಮ ನಾಯ್ಕ ಬಂಧಿತ ಆರೋಪಿ.
ಬೆಳ್ಳಾರೆಯ ಪಾಟಾಜೆ ನಿವಾಸಿ ನಳಿನಿ(55) ಮೃತ ಮಹಿಳೆಯಾಗಿದ್ದು, ನಳಿನಿ ಅವರ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ರವಿವಾರ ರಾತ್ರಿ ನಡೆದಿತ್ತು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ಹಿನ್ನೆಲೆ
ನಳಿನಿ ಅವರು 2 ವರ್ಷಗಳ ಹಿಂದೆ ಮನೆ ಬಿಟ್ಟಿದ್ದು, ವಾರಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು. ಬಸ್ ನಿಲ್ದಾಣ, ಮತ್ತಿತರ ಕಡೆಗಳಲ್ಲಿ ನಳಿನಿ ಮಲಗುತ್ತಿದ್ದರು. ಇನ್ನು ಆರೋಪಿ ಜಯರಾಮ ನಾಯ್ಕ ಕೂಡ ಮನೆ ಬಿಟ್ಟಿದ್ದು, ಆತನೂ ಕೂಡ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ರಾತ್ರಿ ಉಳಿಯುತ್ತಿದ್ದ. ಆರೋಪಿ ಜಯರಾಮ ಮದ್ಯವ್ಯಸನಿಯಾಗಿದ್ದನು. ನಳಿನಿ ಹಾಗೂ ಜಯರಾಮ ಕೊಲೆ ನಡೆದ ರಾತ್ರಿ ಬೆಳ್ಳಾರೆಯ ಎಪಿಎಂಸಿ ಮಾರುಕಟ್ಟೆ ಬಳಿ ತಂಗಿದ್ದರು. ಮಧ್ಯರಾತ್ರಿ ಎದ್ದು ಹೊರಗಡೆ ಹೋಗುವಾಗ ನಳಿನಿ ಅವರ ಕಾಲಿಗೆ ಜಯರಾಮ ತುಳಿದು ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕುಡಿತದ ಅಮಲಿನಲ್ಲಿದ್ದ ಜಯರಾಮ ಕಲ್ಲನ್ನು ತಂದು ನಳಿನಿ ಅವರ ತಲೆಗೆ ಎತ್ತಿ ಹಾಕಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ನಳಿನಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.