ಬಂಟ್ವಾಳ, ಜೂ. 12(DaijiworldNews/AA): ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಸರ್ವೀಸ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ)ವು ದುರಸ್ತಿ ಮಾಡಿ ಟೋಲ್ ತಪ್ಪಿಸಿಕೊಂಡು ಹೋಗುವ ಘನ ವಾಹನಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಒಂದು ಬದಿಯ ಸರ್ವೀಸ್ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ಕಬ್ಬಿಣದ ಕಮಾನು ಅಳವಡಿಸಿದ್ದು, ಮತ್ತೊಂದು ಬದಿಯಲ್ಲಿ ಕಮಾನು ಹಾಕದೆ ಹಾಗೇ ಬಿಟ್ಟಿರುವ ಕಂಬಕ್ಕೆ ಇದೀಗ ವಾಹನ ಢಿಕ್ಕಿಯಾಗಿ ಹಾನಿಯಾಗಿದೆ.
ಸರ್ವೀಸ್ ರಸ್ತೆಯನ್ನು ದುರಸ್ತಿಪಡಿಸಿ ಬಿ.ಸಿ.ರೋಡು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಕಮಾನು ಅಳವಡಿಸಲಾಗಿದ್ದು, ಮಂಗಳೂರು ಕಡೆಯಿಂದ ಬಿ.ಸಿ.ರೋಡು ಭಾಗಕ್ಕೆ ಆಗಮಿಸುವ ಸರ್ವೀಸ್ ರಸ್ತೆಗೆ ಕಮಾನಿಗಾಗಿ ಎರಡೂ ಬದಿ ಕಂಬ ಹಾಕಿ ಮೇಲಿನ ಭಾಗದ ಕಬ್ಬಿಣ ಅಳವಡಿಸದೆ ಹಾಗೇ ಬಿಡಲಾಗಿತ್ತು.
ಒಂದು ಭಾಗದ ಕಮಾನು ಅಳವಡಿಕೆಯ ಸಂದರ್ಭದಲ್ಲೇ ಮತ್ತೊಂದು ಭಾಗದಲ್ಲೂ ಕಬ್ಬಿಣದ ಕಂಬಗಳನ್ನು ಹಾಕಲಾಗಿದ್ದು, ಕಮಾನು ಅಳವಡಿಸುವುದಿಲ್ಲ ಎಂದಾದರೆ ಕಂಬಗಳನ್ನು ಯಾಕೆ ಹಾಕಲಾಗಿದೆ ಎಂದು ಪ್ರಶ್ನಿಸುವಂತಾಗಿತ್ತು. ಹಾಕಿರುವ ಒಂದು ಬದಿಯ ಕಂಬ ಬಹುತೇಕ ರಸ್ತೆಯಲ್ಲೇ ಇದ್ದು, ವಾಹನ ಢಿಕ್ಕಿಯಾಗಿ ಅಪಾಯ ಸಂಭವಿಸುವ ಆತಂಕದ ಕುರಿತು ಎಚ್ಚರಿಸಲಾಗಿತ್ತು.
ಇದೀಗ ಯಾವುದೋ ವಾಹನ ಢಿಕ್ಕಿಯಾಗಿ ಒಂದು ಬದಿ ಕಂಬ ಸಂಪೂರ್ಣ ವಾಲಿಕೊಂಡಿದ್ದು, ಇನ್ನು ಕಮಾನು ಅಳವಡಿಸುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಎನ್ಎಚ್ಎಐ ಯಾರ ಒತ್ತಡಕ್ಕೆ ಮಣಿದು ಕಮಾನು ಅಳವಡಿಸಲಿಲ್ಲ, ಕಮಾನು ಅಳವಡಿಸದೇ ಇರುವುದಾದರೆ ಕಂಬಗಳನ್ನು ಯಾಕೆ ಹಾಕಲಾಗಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಮರಳು ತುಂಬಿದ ಲಾರಿಗಳ ಜತೆಗೆ ಇತರ ಘನ ವಾಹನಗಳು ಟೋಲ್ ತಪ್ಪಿಸಿ ಸರ್ವೀಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಅವರ ಒತ್ತಡಕ್ಕೆ ಮಣಿದಿದ್ದಾರೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದರು.
ಇದೀಗ ಕಂಬ ವಾಲಿಕೊಂಡಿದ್ದು, ಮುಂದೆಯೂ ಈ ಕಂಬದಿಂದ ಅಪಾಯ ತಪ್ಪಿದಲ್ಲ. ಇವರು ಘನ ವಾಹನ ಸಂಚಾರ ನಿಷೇಧಿಸಿ ಕಮಾನು ಅಳವಡಿಸಲೇಬಾರದು ಎಂದು ಯಾರಾದರೂ ಉದ್ದೇಶಪೂರ್ವಕವಾಗಿಯೇ ಕಂಬಕ್ಕೆ ಹಾನಿ ಮಾಡಿದ್ದಾರೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.