ಉಡುಪಿ, ಜೂ. 12(DaijiworldNews/AA): ಕಳೆದ ಕೆಲವು ಹಿಂದೆಗಳ ಹಿಂದೆ ಮಲ್ಪೆ ಸೀವಾಕ್ನ ಎಲ್ಲಾ ದೀಪಗಳು ಕೆಟ್ಟು ಹೋಗಿದ್ದು ಇದರ ಬಗ್ಗೆ ಫೆಬ್ರವರಿ 21ರಂದು ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಪ್ರಕಟವಾಗಿತ್ತು. ಇದೀಗ ಸಮಸ್ಯೆಗಳನ್ನು ಅರಿತ ಅಧಿಕಾರಿಗಳು ತಕ್ಷಣದ ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದಾರೆ.
53.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮಲ್ಪೆ ಸೀ ವಾಕ್ ಸುಮಾರು 450ಮೀ ಉದ್ದ ಮತ್ತು 2.4ಮೀ ಅಗಲವಿದೆ. ಈ ಮಾರ್ಗಕ್ಕೆ ಸ್ಲಿಪ್ ಪ್ರೂಫ್ ನೆಲವನ್ನು ಕೂಡ ಅಳವಡಿಸಲಾಗಿತ್ತು ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಹಲವಾರು ದೀಪ ಕಂಬಗಳು ತುಕ್ಕು ಹಿಡಿದು ನೆಲಕ್ಕೆ ಬಾಗಿತ್ತು. ಇದೀಗ ಸವೆದಿದ್ದ ಟೈಲ್ಸ್ ಗಳನ್ನು ಸರಿಪಡಿಸಲಾಗಿದೆ. ಈ ಹಿಂದೆ ಕೆಲಸ ಮಾಡದ ಅಲಂಕಾರಿಕ ದೀಪಗಳು ಈಗ ಕಾರ್ಯನಿರ್ವಹಿಸುತ್ತಿವೆ.
ಮಲ್ಪೆ ಸೀ ವಾಕ್ ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ಅದರ ಮೂಲಭೂತ ಸೌಕರ್ಯಗಳನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು. ಮೂಲಸೌಕರ್ಯಗಳ ಕೊರತೆಯಿಂದಾಗಿ ಪ್ರವಾಸಿಗರು ಸೀ ವಾಕ್ನಲ್ಲಿ ಸಂಚರಿಸಲು ಭಯಪಡುವಂತ ಪರಿಸ್ಥಿತಿ ಉಂಟಾಗಿತ್ತು. ಸೀ ವಾಕ್ನಲ್ಲಿ ಕುಳಿತುಕೊಳ್ಳುವಂತಹ ಸ್ಥಳಗಳು ಹಾನಿಗೊಳಗಾಗಿದ್ದವು. ಆದರೆ ಈಗ ಎಲ್ಲಾ ದೀಪ ಕಂಬಗಳನ್ನು ಬದಲಾಯಿಸಿ ಹೊಸ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಜೊತೆಗೆ ತ್ಯಾಜ್ಯವಿಲ್ಲದಂತೆ ಸ್ವಚ್ಛಗೊಳಿಸಲಾಗಿದೆ. ಈ ಮೂಲಕ ಪ್ರವಾಸಿಗರಿಗೆ ಸಂಚರಿಸಲು ಅಪಾಯಕಾರಿಯಾಗಿದ್ದ ಮಲ್ಪೆ ಸೀ ವಾಕ್ ಇದೀಗ ಸುರಕ್ಷಿತವಾಗಿದೆ.