ಮಂಗಳೂರು, ಜೂ. 12(DaijiworldNews/AA): ಜುಲೈ 22 ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರತಿ ದಿನವು ಸಂಚರಿಸಲಿದೆ.
ಮಂಗಳೂರಿನಿಂದ ಅಬುಧಾಬಿಗೆ ಸಂಚರಿಸುವ ವಿಮಾನಗಳ ಸಂಖ್ಯೆಯಲ್ಲಿ ಏರಿಕೆ ಮಾಡಲು ಏರ್ ಇಂಡಿಯಾ ಎಕ್ಸ್ಪ್ರೆಸ್ ನಿರ್ಧಾರ ಮಾಡಿದೆ. ಈ ನಿರ್ಧಾರದ ಅನುಸಾರ ಪ್ರಸ್ತುತ ವಾರದಲ್ಲಿ ನಾಲ್ಕು ದಿನಗಳು ಮಾತ್ರ ಮಂಗಳೂರಿನಿಂ ದ ಅಬುಧಾಬಿಗೆ ಸಂಚರಿಸುತ್ತಿದ್ದ ವಿಮಾನಗಳು, ಜುಲೈ 22ರಿಂದ ದಿನನಿತ್ಯವೂ ಸಂಚರಿಸಲಿವೆ.
ಪ್ರಸ್ತುತ ಇಂಡಿಗೋ 4 ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ 1 ವಿಮಾನ ಸೇರಿ ಒಟ್ಟು 5 ವಿಮಾನಗಳು ಬೆಂಗಳೂರು-ಮಂಗಳೂರು ನಡುವೆ ಸಂಚರಿಸುತ್ತಿದೆ. ಜುಲೈ 8 ರಿಂದ, ಈ ವಲಯದಲ್ಲಿ ದಿನನಿತ್ಯ ಒಟ್ಟು 6 ವಿಮಾನಗಳು ಸಂಚರಿಸಲಿದೆ. ಅಂದಿನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ತನ್ನ ಎರಡನೇ ದೈನಂದಿನ ಸಂಚಾರವನ್ನು ಬೆಂಗಳೂರಿನಿಂದ ಮಂಗಳೂರಿಗೆ ಪುನರಾರಂಭಿಸಲಿದೆ. ಈ ಸಂಖ್ಯೆಯು ಜುಲೈ 22 ರಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು 7 ಕ್ಕೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಸದ್ಯ ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಚರಿಸುವ ಏರ್ ಇಂಡಿಯಾ ಎಕ್ಸ್ಪ್ರೆಸ್ ಮುಂದೆ ಸಂಪೂರ್ಣ ದೇಶೀಯ ವಿಮಾನವಾಗಿ ಬದಲಾಗಲಿದೆ. ಅಬುಧಾಬಿಗೆ ತೆರಳುವವರು ಮಂಗಳೂರಿನಿಂದ ಪ್ರತಿ ದಿನದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಏರಲಿದ್ದಾರೆ ಎನ್ನಲಾಗಿದೆ.