ಉಡುಪಿ, ಜೂ. 11(DaijiworldNews/AA): ಭಾರೀ ಗಮನ ಸೆಳೆದಿರುವ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುದೀರ್ಘ ಗೈರುಹಾಜರಿಯ ಬಳಿಕ ನಾಳೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ವಿಶೇಷವಾಗಿ ಇತ್ತೀಚಿನ ಚುನಾವಣಾ ಅವಧಿಯಲ್ಲಿ ಜಿಲ್ಲೆಯ ವ್ಯವಹಾರಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅನುಪಸ್ಥಿತಿಯಿಂದಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಸಾಕಷ್ಟು ಟೀಕೆಗಳ ಹಿನ್ನೆಲೆಯಲ್ಲಿ ಅವರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದಾಗಿನಿಂದಲೂ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದೆ ದೂರ ಉಳಿದಿದ್ದರು. ಈ ಗೈರುಹಾಜರಿಯು ಉಡುಪಿಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಾಗ್ವಾದಕ್ಕೆ ಕಾರಣವಾಗಿತ್ತು. ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ "ಗೋ ಬ್ಯಾಕ್" ಅಭಿಯಾನ ಮಾಡಲಾಗಿತ್ತು. ಇದರಿಂದಾಗಿ ಪಕ್ಷದ ಸ್ಥಳೀಯ ಕಾರ್ಯಕರ್ತರೊಳಗೆ ಬಿರುಕು ಉಂಟಾಗಿತ್ತು.
ಹೆಬ್ಬಾಳ್ಕರ್ ಅವರು ನಾಳೆ ಮಧ್ಯಾಹ್ನ 12 ಗಂಟೆಗೆ ಜಿಲ್ಲೆಗೆ ಆಗಮಿಸಲಿದ್ದಾರೆ. ಬಳಿಕ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.