ಮಂಗಳೂರು, ಜೂ. 11(DaijiworldNews/AA): ಬಂಟ್ವಾಳದ ಬೋಳಿಯಾರ್ನಲ್ಲಿ ನಡೆದ ಚೂರಿ ಇರಿತ ಘಟನೆಯ ಸಮಗ್ರ ತನಿಖೆ ಮಾಡಬೇಕು. ಏಕಾಏಕಿ ಈ ರೀತಿಯ ಮಾರಣಾಂತಿಕಹಲ್ಲೆ ಆಗುವುದಿಲ್ಲ. ಭಾರತ ಮಾತೆಗೆ ಜೈಕಾರ ಹಾಕಿದ್ದಕ್ಕಾಗಿ ನೇರವಾಗಿ ಬಂದು ಆ ರೀತಿಯ ಆಯುಧಗಳನ್ನು ಇಟ್ಟುಕೊಂಡು ಹಲ್ಲೆ ಮಾಡುತ್ತಾರೆ ಎಂದರೆ ಅದು ಪೂರ್ವಯೋಜಿತ ಕೃತ್ಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಈ ಐತಿಹಾಸಿಕೆ ಕ್ಷಣವನ್ನು ಸಂಭ್ರಮಾಚರಣೆ ಮಾಡುವಂತಹ ಸಂದರ್ಭದಲ್ಲಿ ತಾಯಿ ಭಾರತಿಗೆ ಘೋಷಣೆ ಹಾಕಿದ್ದಕ್ಕೋಸ್ಕರ ಜಿಹಾದಿ ಮಾಸಸಿಕತೆ ವ್ಯಕ್ತಿಗಳು ನಮ್ಮ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದು ಅತ್ಯಂತ ಕಳವಳಕಾರಿ ಹಾಗೂ ಖೇದಕರವಾದಂತಹ ಘಟನೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸ ನಡೆಯುತ್ತಿದೆ. ಇದೀಗ ಬೋಳಿಯಾರ್ ನಲ್ಲಿ ಈ ರೀತಿಯ ಘಟನೆ ನಡೆದಿದೆ. ಭಾರತ ಮಾತೆಗೆ ಜೈಕಾರ ಹಾಕಿದ್ದಕ್ಕಾಗಿ ಇಂದು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾಗುತ್ತದೆ. ಜೊತೆಗ ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರು ಕೇಸ್ ಮಾಡುವಂತಹ ಪರಿಸ್ಥಿತಿಗೆ ಕರ್ನಾಟಕ ಬಂದು ನಿಂತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವುದು ಹಾಗೂ ಶಾಂತಿಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ. ಯಾವುದೋ ರಾಜಕೀಯ ಪುಡಾರಿಗಳ ಮಾತಿಗೆ ಅಥವಾ ಕಾಂಗ್ರೆಸ್ ನಾಯಕರ ಮಾತಿಗೆ ಬಿದ್ದು ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ, ಶಾಂತಿ ಹದಗೆಟ್ಟರೆ ಅದಕ್ಕೆ ನೇರ ಜವಬ್ದಾರಿ ಪೊಲೀಸ್ ಇಲಾಖೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇವತ್ತು ದ.ಕ ಜಿಲ್ಲೆಯಲ್ಲಿ ಪಟಾಕಿ ಸಿಡಿಸಿದರೆ ಕೇಸ್, ಸಂಭ್ರಮಾಚರಣೆ ಮಾಡಿದರೆ ಕೇಸ್ ಎಂಬ ಸ್ಥಿತಿ ಬಂದಿದೆ. ಇದರೊಂದಿಗೆ ಭಾರತ ಮಾತೆಗೆ ಜೈಕಾರ ಹಾಕಿದರೆ ಕೇಸ್ ಹಾಕುವಂತಹ ಪರಿಸ್ಥಿತಿಗೆ ಮುಟ್ಟಿದೆ ಎಂದರೆ ಯಾವ ರೀತಿಯ ರಾಜ್ಯದಲ್ಲಿ ಇದ್ದೇವೆಂದು ನಾವೆಲ್ಲಾ ಯೋಚನೆ ಮಾಡಬೇಕಾಗಿದೆ. ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ಆಗಿರುವಂತಹ ಹಲ್ಲೆಯ ಪೂರ್ತಿ ತನಿಖೆಯನ್ನು ಮಾಡಿ, ಆ ವಿಡಿಯೋದಲ್ಲಿರುವ ಎಲ್ಲರನ್ನೂ ಬಂಧಿಸಿ ತನಿಖೆ ಮಾಡಬೇಕು. ಈ ಘಟನೆಯ ಹಿಂದೆ ಯಾರಿದ್ದಾರೆ ಎಂದು ಬೆಳಗಿಗೆ ಬರಬೇಕು ಎಂದು ಅವರು ಆಗ್ರಹಿಸಿದರು.
ಪ್ರಕರಣದ ಹಿಂದೆ ಕಾಂಗ್ರೆಸ್ನ ನಾಯಕರಿದ್ದಾರೆ. ಘಟನೆಯ ಹಿಂದಿರುವ ಶಕ್ತಿಗಳ ವಿರುದ್ಧವೂ ಕ್ರಮ ಆಗಬೇಕು. ಮಾರಣಾಂತಿಕ ಹಲ್ಲೆ ನಡೆದು ನಮ್ಮ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬಂದ್ರು ಗಾಯಗೊಂಡವರನ್ನು ವಿಚಾರಿಸಿಲ್ಲ. ಕಾಂಗ್ರೆಸ್ ಪಕ್ಷದ ಒತ್ತಡದಿಂದ ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ಹಿಂದೂ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.