ಉಡುಪಿ, ಜೂ. 11(DaijiworldNews/AA): ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಕಡಲ ತೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮುಂಗಾರು ಮಳೆಯಿಂದಾಗಿ ಸಮುದ್ರದ ಅಲೆಗಳಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ, ಸುರಕ್ಷತಾ ದೃಷ್ಟಿಯಿಂದ ತಡೆ ಬೇಲಿ ಹಾಕಲಾಗಿದೆ. ಪ್ರವಾಸಿಗರು ದೂರದಿಂದಲೇ ಸಮುದ್ರ ವೀಕ್ಷಿಸಲು ಅವಕಾಶ ನೀಡಲಾಗಿದೆ.
ಸುಮಾರು 1 ಕಿಲೋ ಮೀಟರ್ ಉದ್ದದ ಬೇಲಿ ಹಾಕಲಾಗಿದ್ದು, ಅಪಾಯಕಾರಿ ಸ್ಥಿತಿಯನ್ನು ತಿಳಿಸಲು ಅಲ್ಲಲ್ಲಿ ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ. ಕನ್ನಡ, ಇಂಗ್ಲಿಷ್ ಸೇರಿದಂತೆ 12 ಭಾಷೆಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಹೀಗೆ ಮಲ್ಪೆ ಬೀಚ್ ನಲ್ಲಿ ಮಳೆಗಾಲದ ಕಾರಣಕ್ಕೆ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
ಮಳೆಗಾಲ ಆರಂಭವಾಗಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುತ್ತದೆ. ಜೊತೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೀಚ್ ವೀಕ್ಷಿಸಲು ಬರುತ್ತಿದ್ದಾರೆ. ಅಲೆಗಳ ಅಬ್ಬರ ಹೆಚ್ಚಳವಾಗಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ನೀರಿನಲ್ಲಿ ಸುಮಾರು 7 ಅಡಿ ಎತ್ತರದ ನೆಟ್ ಅಳವಡಿಸಲಾಗಿದೆ. ಪ್ರವಾಸಿಗರಿಗೆ ಸೂಚನೆ ನೀಡಲು ಎಲ್ಲಾ ಕಡೆ ಕೆಂಪು ಬಾವುಟ ನೆಡಲಾಗಿದ್ದು, ಪ್ರವಾಸಿಗರು ಸಹಕರಿಸುವಂತೆ ಕೋರಲಾಗಿದೆ.