ಮಂಗಳೂರು, ಜೂ. 11(DaijiworldNews/AA): ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರಿನಲ್ಲಿ ನಡೆದ ಚೂರಿ ಇರಿತ ಪ್ರಕರಣದಲ್ಲಿ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೋತ್ಸವದ ನಂತರ ಇಬ್ಬರು ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯು ಬಹಳ ಕಳವಳಕಾರಿಯಾದ ಸಂಗತಿಯಾಗಿದೆ. ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದಾರೆ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಒಬ್ಬ ವ್ಯಕ್ತಿಯನ್ನು ಕೊಲ್ಲುವ ಪ್ರಯತ್ನ ಮಾಡುತ್ತಾರೆಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.
ಈ ಅನಾಹುತಗಳಿಗೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯೇ ಹೊಣೆ ಇನ್ನು ಸರಿಪಡಿಸುತ್ತರೋ ಗೊತ್ತಿಲ್ಲ ಆದರೆ ಹಿಂದೂ ಸಮಾಜ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು. ಈ ವಿಚಾರವನ್ನು ಗಮನಿಸಿದರೆ ಹಿಂದೂಗಳಿಗೆ ಕಾನೂನನ್ನು ನೀವೆ ಕೈಗೆತ್ತಿಕೊಳ್ಳಿ ಎಂಬ ಸೂಚನೆಯನ್ನು ಸರಕಾರವೇ ನೀಡಿದಂತೆ ಕಾಣುತ್ತಿದೆ ಎಂದರು.
ಇನ್ನು ಬಿಜೆಪಿ ಕಾಯಕರ್ತರ ಮೇಲೆ ನೀಡಲಾದ ಪ್ರತಿ ದೂರಿನ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ನವರ ಪ್ರೇರಣೆಯಿಂದ ಕಾರ್ಯಕರ್ತರ ಮೇಲೆ ಕೇಸ್ ಹಾಕಿರುವ ವಿಚಾರ ನಮ್ಮ ಅರಿವಿಗೆ ಬಂದಿದೆ. ವಿಜಯೋತ್ಸವ ಮುಗಿದ ನಂತರ ಮೂರು ಮಂದಿ ಯುವಕರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಹೊರತಾಗಿ ಪ್ರಚೋದನಾಕಾರಿ ಘೋಷಣೆ ಕೂಗಿಲ್ಲ. ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ಭಾರತ್ ಮಾತಾ ಕೀ ಜೈ ಎನ್ನುವುದು ಪ್ರಚೋದನಕಾರಿ ಘೋಷಣೆ ಎಂದಾದರೆ ನಾವು ಪಾಕಿಸ್ತಾನದಲ್ಲಿ ಇದ್ದೇವಾ ಅಥವಾ ಭಾರತದಲ್ಲಿ ಇದ್ದೇವಾ ಎಂಬ ಪ್ರಶ್ನೆ ಮೂಡುತ್ತದೆ. ಪಾಕಿಸ್ತಾನ್ ಜಿಂದಾಬಾದ್ ಎಂದವರ ಮೇಲೆ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುವವರು ಭಾರತ್ ಮಾತಕೀ ಜೈ ಎಂದವರಿಗೆ ಹಲ್ಲೆಯಾದಾಗ ಪ್ರೋತ್ಸಾಹ ನೀಡುವ ಸರ್ಕಾರದ ವಿರುದ್ಧ ಕಿಡಿಕಾರಿದರು.
ವಿಜಯೋತ್ಸವ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತ ಇನೋಳಿ ಧರ್ಮನಗರ ನಿವಾಸಿ ಹರೀಶ್ (35) ಹಾಗೂ ಅವರ ಭಾವ ವಿನೋದ್ (40) ಎಂಬವರ ಮೇಲೆ ತಂಡವೊಂದು ಚೂರಿಯಿಂದ ಇರಿದಿತ್ತು. ಬಳಿಕ ಇವರಿಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.