ಮಂಗಳೂರು, ಜೂ. 10(DaijiworldNews/AA): ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಲ್ಲಿ ಜೆಸ್ಯೂಟ್ ಚರ್ಚ್ ಫಾದರ್ ಆಗಿದ್ದ ಮಂಗಳೂರು ಮೂಲದ ಡಾ. ಆನಂದ್ ಪಿರೇರಾ (56) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
1986ರಲ್ಲಿ ಜೆಸ್ಯೂಟ್ ಸೊಸೈಟಿಗೆ ಸೇರ್ಪಡೆಯಾಗಿದ್ದ ಆನಂದ್ ಪಿರೇರಾ ಅವರು 1995ರಲ್ಲಿ ಈಶಾನ್ಯ ಭಾರತದಲ್ಲಿ ಜೆಸ್ಯೂಟ್ ಸೇವೆಗೆ ನಿಯೋಜನೆಗೊಂಡಿದ್ದರು. 2000ನೇ ಇಸವಿಯಲ್ಲಿ ಆನಂದ್ ಪಿರೇರಾ ಅವರು ಫಾದರ್ ಆಗಿ ಸೇವೆ ಪ್ರಾರಂಭಿಸಿದ್ದರು. ಆನಂದ್ ಪಿರೇರಾ ಅವರು ಮಂಗಳೂರಿನ ಹೆಸರಾಂತ ಪಿರೇರಾ ಹೊಟೇಲ್ ಮಾಲೀಕ ದಿವಂಗತ ಚಾರ್ಲ್ಸ್ ಪಿರೇರಾ ಅವರ ಪುತ್ರನಾಗಿದ್ದಾರೆ. ಇವರ ತಾಯಿ ಜಾನೆಟ್ ಪಿರೇರಾ ಸೈಂಟ್ ಅಲೋಶಿಯಸ್ ಕಾಲೇಜು ಪ್ರೈಮರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತಿಯಾಗಿದ್ದಾರೆ.
2010ರಲ್ಲಿ ಆನಂದ್ ಪಿರೇರಾ ಅವರು ನೆಬ್ರಾಸ್ಕದ ಕ್ರೆಗ್ನನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ನಂತರ ಪುಣೆ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಗಳಿಸಿದರು. 2017 ರಿಂದ 2019ರವರೆಗೆ ಅವರು ಮಣಿಪುರದ ಮೊಯಿರಾಂಗ್ನಲ್ಲಿರುವ ಸೈಂಟ್ ಕ್ಸೇವಿಯರ್ ಪ್ರೌಢಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 2019 ರಲ್ಲಿ, ಅವರು ಜೆಸ್ಯೂಟ್ ಹೌಸ್ ಕಮ್ಯುನಿಟಿ ಮುಖ್ಯಸ್ಥರಾಗಿ ಮತ್ತು ಅಸ್ಸಾಂನ ಗುವಾಹಟಿಯಲ್ಲಿ ಪ್ರಾದೇಶಿಕ ಅಭಿವೃದ್ಧಿ ನಿರ್ದೇಶಕರಾಗಿ ನೇಮಕಗೊಂಡರು. 2023 ರಲ್ಲಿ, ಅವರು ಜೆಸ್ಯೂಟ್ಸ್ ಅರುಣಾಚಲ ಮಿಷನ್ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. ಅವರು ನಾಗಾಲ್ಯಾಂಡ್ನ ಕೊಹಿಮಾದಲ್ಲಿ ಜೆಸ್ಯೂಟ್ ಪ್ರದೇಶದ ಮುಖ್ಯಸ್ಥರಾಗಿ ಜವಾಬ್ದಾರಿಯನ್ನು ಹೊಂದಿದ್ದರು.