ಪುತ್ತೂರು, ಮೇ 12 (Daijiworld News/SM): ವೃದ್ಧ ದಂಪತಿಯನ್ನು ಅವರ ಮಕ್ಕಳೇ ಸೇರಿಕೊಂಡು ಬಲತ್ಕಾರವಾಗಿ ಮನೆಯಿಂದ ಹೊರದಬ್ಬಿ, ಅವರಿದ್ದ ಮನೆಯನ್ನು ಹಿಟಾಚಿ ಮೂಲಕ ಕಡೆವಿದ ಘಟನೆ ಕೆದಿಲ ಗ್ರಾಮದ ಬೀಟಿಗೆಯಲ್ಲಿ ನಡೆದಿದೆ. 9 ಮಕ್ಕಳ ಪೈಕಿ ಮೂವರು ಮಕ್ಕಳು ಮನೆಯಿಂದ ತಮ್ಮನ್ನು ಹೊರ ಹಾಕಿದ್ದಾರೆಂದು ವೃದ್ಧ ದಂಪತಿ ಆರೋಪಿಸಿದ್ದಾರೆ.
ಕೆದಿಲ ಗ್ರಾಮದ ಬೀಟಿಗೆ ಆರ್.ಕೆ. ಮಂಝಿಲ್ ನಿವಾಸಿ ಮಹಮ್ಮದ್ (75) ಮತ್ತು ಅವರ ಪತ್ನಿ ಖತಿಜಮ್ಮ(72) ಎಂಬವರನ್ನು ಅವರ ಮಕ್ಕಳೇ ಸೇರಿಕೊಂಡು ಮನೆಯಿಂದ ಹೊರದಬ್ಬಿದ್ದಾರೆ. ಘಟನೆಯಲ್ಲಿ ಅವರಿಬ್ಬರಿಗೂ ಗಾಯವಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ:
ಬೀಟಿಗೆ ಮಹಮ್ಮದ್ ಹಾಗೂ ಖತಿಜಮ್ಮ ದಂಪತಿಯ ಒಂಬತ್ತು ಮಂದಿ ಮಕ್ಕಳ ಪೈಕಿ 2ನೇ ಪುತ್ರ ಇಸ್ಮಾಯಿಲ್ನ ಮಗಳ ವಿವಾಹ ಸಮಾರಂಭಕ್ಕೆಂದು ಏ.6ಕ್ಕೆ ವೃದ್ಧ ದಂಪತಿ ತೆರಳಿತ್ತು. ಸಮಾರಂಭ ಮುಗಿಸಿ ಮೇ 10ಕ್ಕೆ ಬೀಟಿಗೆ ಮನೆಗೆ ಹಿಂದಿರುಗಿದ್ದಾರೆ. ಅಂದು ದಂಪತಿಯ 3ನೇ ಪುತ್ರ ಬುಡೋಳಿಯಲ್ಲಿರುವ ತಾಜುದ್ದೀನ್, ಆತನ ಪತ್ನಿ ಯಾಸೀರಾ, 4ನೇ ಪುತ್ರ ಕಬಕ ನಿವಾಸಿ ಸಂಶುದ್ದೀನ್, ಆತನ ಪತ್ನಿ ಫಾತಿಮಾ ಹಾಗೂ ಪುತ್ರಿಯರ ಪೈಕಿ 2ನೇ ಪುತ್ರಿ ಐಸಮ್ಮ ಮತ್ತು ಆಕೆಯ ಗಂಡ ಮಹಮ್ಮದ್, ಅವರ ಪುತ್ರ ಹಾರಿಸ್ ಏಕಾಏಕಿ ಬೀಟಿಗೆ ಆಗಮಿಸಿದ್ದಾರೆ. ಹಾಗೂ ಯಾವುದೇ ಸೂಚನೆ ನೀಡದೆ ಹಿಟಾಚಿ ಸಹಾಯದಿಂದ ವೃದ್ಧ ದಂಪತಿಗಳಿದ್ದ ಮನೆ ಕೆಡವಲು ಮುಂದಾಗಿದ್ದಾರೆ.
ಈ ಸಂದರ್ಭ ವೃದ್ದರು ಮನೆಯಿಂದ ಹೊರಗೆಡೆ ಬರದೇ ಇದ್ದಂತಹ ಸಂದರ್ಭ ಅವರನ್ನು ಬಲತ್ಕಾರವಾಗಿ ಹೊರದಬ್ಬಲಾಗಿದೆ. ಬಳಿಕ ಮನೆಯನ್ನು ಹಿಟಾಚಿ ಮೂಲಕ ಕೆಡವಿದ್ದಾರೆ. ಇನ್ನು ಘಟನೆಯ ಕುರಿತು 2ನೇ ಪುತ್ರ ಇಸ್ಮಾಯಿಲ್ಗೆ ಮಾಹಿತಿ ನೀಡಿದಾಗ ಆತ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸ್ ಸ್ಥಳಕ್ಕೆ ಬಂದು ಹಿಟಾಚಿ ಕೆಲಸವನ್ನು ನಿಲ್ಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪುತ್ತೂರು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.