ಮಂಗಳೂರು, ಮೇ 12 (Daijiworld News/SM): ಸಲಿಂಗ ಕಾಮದಂತಹ ಅನುಚಿತ ವರ್ತನೆ ತೋರಿದ ದೈವ ಪಾತ್ರಿಯೋರ್ವರ ಕೂದಲನ್ನು ಬಲವಂತವಾಗಿ ಕತ್ತರಿಸಿ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಲೋಕೇಶ್ ಪೂಜಾರಿ ಎಂಬ ದೈವ ಪಾತ್ರಿಯೊಬ್ಬರಿಗೆ ಜನರ ಗುಂಪೊಂದು ಪ್ರಶ್ನಿಸುತ್ತಿದ್ದು, ಖಡಗ ತೆಗೆಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಬಲವಂತವಾಗಿ ಪಾತ್ರಿಯ ಕೂದಲನ್ನು ಕತ್ತರಿಸಿದ್ದಾರೆ. ಈ ನಡುವೆ ಕೆಲವರು ಪಾತ್ರಿಯ ಬಳಿ ಸ್ಪಷ್ಟನೆ ನೀಡುವಂತೆ ಹಾಗೂ ಕ್ಷಮೆಯಾಚಿಸುವಂತೆ ಒತ್ತಾಯಿಸುವ ಧ್ವನಿ ಕೂಡ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ನಡೆಯುತ್ತಿದೆ. ಕೆಲವರು ಆ ಗುಂಪು ಮಾಡಿರುವ ಕೃತ್ಯ ಸಮರ್ಥಿಸಿಕೊಂಡಿದ್ದಾರೆ. ಆದರೆ, ಮತ್ತೆ ಕೆಲವು ಮಂದಿ ಈ ಕೃತ್ಯ ಖಂಡಿಸಿದ್ದು, ಯಾರಿಗೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಇಲ್ಲ ಎಂಬುವುದಾಗಿ ಟೀಕಿಸಿದ್ದಾರೆ.
ಇನ್ನು ಘಟನೆಯ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.