ಮಂಗಳೂರು, ಜೂ. 08(DaijiworldNews/AA): ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಆರೋಪಿಯು ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಬಜಪೆ ಕಳವಾರ ಚರ್ಚ್ ಬಳಿಯ ಖುರ್ಸು ಗುಡ್ಡ ನಿವಾಸಿ ಕಲಂದರ್ ಶಾಫಿ(31) ಪ್ರಕರಣದ ಆರೋಪಿ.
ಯುವತಿಯು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿ ಕಲಂದರ್ ಶಾಫಿ ವಿರುದ್ಧ ಐಪಿಸಿ ಸೆಕ್ಷನ್ 354(ಎ), 354(ಡಿ)ರಂತೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ದಸ್ತಗಿರಿ ಕ್ರಮ ಜರುಗಿಸಿ, ಆತನನ್ನು ವಿಚಾರಿಸಿದಾಗ ಈ ಕೃತ್ಯ ನಡೆದ ಸಮಯದಲ್ಲಿ ತನಗೆ ಸಾರ್ವಜನಿಕರಿಂದ ಹಲ್ಲೆಯಾದ ಬಗ್ಗೆ ಆರೋಪಿಸಿರುವುದಿಲ್ಲ. ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಿ ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು, ಪ್ರಸ್ತುತ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.
ಘಟನೆಯ ಹಿನ್ನಲೆ
ಯುವತಿ ಮಂಗಳೂರು ನಗರದ ನಾಗೂರಿಯಲ್ಲಿರುವ ಕಂಪನಿಯೊಂದರಲ್ಲಿ ಪ್ರೊಡಕ್ಟ್ಗಳನ್ನು ಸೇಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಯುವತಿ ಶುಕ್ರವಾರದಂದು ಬೆಳಗ್ಗೆ ಪ್ರೊಡಕ್ಸ್ ಸೇಲ್ ಕೆಲಸಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಗೆ ಬಂದು ಸ್ಟೇಟ್ ಬ್ಯಾಂಕ್ ನಿಂದ ಬಜಪೆ ಕಡೆಗೆ ಹೋಗುವ ಬಸ್ಸಿನಲ್ಲಿ ಹತ್ತಿ ಕಂಡಕ್ಟರ್ ಸೈಡ್ ನ 4ನೇ ಸೀಟಿನಲ್ಲಿ ಕುಳಿತುಕೊಂಡಿದ್ದಾಳೆ. ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ಕಲಂದರ್ ಶಾಫಿ, ಆಕೆ ಕುಳಿತುಕೊಂಡಿದ್ದ ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳುತ್ತಾನೆ. ಬಳಿಕ ಸೊಂಟಕ್ಕೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಸಾರ್ವಜನಿಕರು ಆರೋಪಿಯನ್ನು ಹಿಡಿದು, ಧರ್ಮದೇಟು ನೀಡಿದ್ದರು.