ಮಂಗಳೂರು, ಜೂ. 08(DaijiworldNews/AA): ಕಳೆದ 10 ವರ್ಷದ ನರೇಂದ್ರ ಮೋದಿಯ ನೇತೃತ್ವದ ಬಿಜೆಪಿ ನೀತಿ, ಅವರ ಹೇಳಿಕೆಗಳಿಂದ ಇದೀಗ ಬಿಜೆಪಿಗೆ ಎನ್ಡಿಎ ನೇತೃತ್ವ ವಹಿಸುವ ನೈತಿಕತೆ ಉಳಿದಿಲ್ಲ. ಹಿಂದಿನ ಅವಧಿಯಲ್ಲಿ ಎನ್ಡಿಎಯ ಭಾಗವಾಗಿದ್ದ ಮೈತ್ರಿ ಪಕ್ಷಗಳನ್ನು ತಲೆ ಎತ್ತಿಯೂ ನೋಡದ ನರೇಂದ್ರ ಮೋದಿಯವರು ಇಂದು ಅಧಿಕಾರದ ಚುಕ್ಕಾಣಿ ಹಿಡಿಯಲು ಕೈ ಹಿಡಿದು ಎಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ವಿಧಾನ ಪರಿಷತ್ನ ನೂತನ ಸದಸ್ಯ ಐವನ್ ಡಿಸೋಜಾ ವ್ಯಂಗ್ಯ ಮಾಡಿದ್ದಾರೆ.
ಎರಡನೆ ಬಾರಿಗೆ ವಿಧಾನ ಪರಿಷತ್ನ ಸದಸ್ಯತ್ವ ಪಡೆದ ಐವನ್ ಡಿಸೋಜಾ ಅವರು ಮಂಗಳೂರಿಗೆ ಭೇಟಿ ನೀಡಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 400ಕ್ಕೂ ಅಧಿಕ ಸ್ಥಾನ ಗಳಿಸುವುದಾಗಿ ಹೇಳಿ ಚುನಾವಣೆಗಿಳಿದಿದ್ದ ಬಿಜೆಪಿ, ಕಳೆದ ಬಾರಿ ಗಳಿಸಿದ ಸ್ಥಾನಕ್ಕಿಂತಲೂ ಕಡಿಮೆ ಸ್ಥಾನ ಗಳಿಸಿದೆ. 13 ರಾಜ್ಯಗಳಲ್ಲಿ ಬಿಜೆಪಿಗೆ ಖಾತೆಯನ್ನೇ ತೆರಲು ಸಾಧ್ಯವಾಗಿಲ್ಲ. ಬಿಜೆಪಿಯ ಭದ್ರಕೋಟೆಯಲ್ಲೇ ಜನತೆ ತಿರಸ್ಕರಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ 5 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದ ನರೇಂದ್ರ ಮೋದಿಯವರ ಜಯದ ಅಂತರ 1.5 ಲಕ್ಷಕ್ಕೆ ಇಳಿಕೆಯಾಗಿದೆ. ವಿಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳ ಮೂಲಕ ದಾಳಿ ನಡೆಸಿ ಚುನಾವಣೆಗಿಳಿದಿದ್ದ ಬಿಜೆಪಿಗೆ ಬಹುಮತ ಗಳಿಸಲು ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದರು.
ಗ್ಯಾರಂಟಿ ಯೋಜನೆ ಕಾಂಗ್ರೆಸ್ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿರುವ ಬದ್ಧತೆ. ಅದನ್ನು ಬಿಜೆಪಿ ಆರೋಪಿಸುತ್ತಿರುವಂತೆ ಯಾವುದೇ ಕಾರಣಕ್ಕೂ ನಿಲ್ಲಿಸಲಾಗದು. ಬದಲಿಗೆ ಈವರೆಗೂ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳದವನ್ನು ಹುಡುಕಿ ನೀಡುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಕಚೇರಿ ತೆರೆದು ಕ್ರಮ ವಹಿಸಲಾಗುತ್ತದೆ ಎಂದು ಅವರು ಐವನ್ ಡಿಸೋಜಾ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರ ನಿಲ್ಲಿಸಲಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕ ಅಶೋಕ್ರವರು ಈ ಬಗ್ಗೆ ಮಾತನಾಡುವ ಬದಲು ಚಾರ್ಸೋ ಪಾರ್ ಎಂದವರಿಗೆ ಯಾಕೆ ಬಹುಮತ ಬಂದಿಲ್ಲ ಅದರ ಬಗ್ಗೆ ಮಾತನಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ಗೆ ಲೋಕಸಭೆಯಲ್ಲಿ 13ರಿಂದ 18 ಸ್ಥಾನ ಗಳಿಸುವ ನಿರೀಕ್ಷೆ ಇತ್ತು. ಅದು ಸಿಗದ ಬಗ್ಗೆ ಬೇಸರವಿದೆ. ಆದರೆ ಕಳೆದ ಅವಧಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ನೈರುತ್ಯ ಕ್ಷೇತ್ರದಲ್ಲಿಯೂ ಸೋಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಈ ಹಿನ್ನೆಡೆಗೆ ಕಾರಣ ಹುಡುಕಿ ಜನರ ಮನ ಗೆಲ್ಲುವ ಕೆಲಸ ತಕ್ಷಣದಿಂದಲೇ ಮಾಡಲಿದೆ. ಮುಂಬರುವ ಜಿ.ಪಂ., ತಾ.ಪಂ., ಹಾಗೂ ಮನಪಾ ಚುನಾವಣೆಗಳಲ್ಲಿ ಗೆಲುವಿಗೆ ತುರ್ತು ಗಮನ ಹರಿಸಲಿದೆ ಎಂದರು.
ಮುಂದೆ ಸಚಿವರಾಗುವ ಸಾಧ್ಯತೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ, ಜಿಲ್ಲೆಗೆ ಈಗಾಗಲೇ ವಿಧಾನಸಭೆ ಸ್ಪೀಕರ್ ಹುದ್ದೆ ಹಾಗೂ ಉಸ್ತುವಾರಿ ಸಚಿವರನ್ನು ನೀಡಲಾಗಿದೆ. ಪಕ್ಷದ ಕೆಲಸ ಮಾಡುವುದು ನನ್ನ ಕರ್ತವ್ಯ. ದೇಶ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಸುಭದ್ರವಾಗಿಸುವ ನಿಟ್ಟಿನಲ್ಲಿ ಕಾರ್ಯಕರ್ತನಾಗಿ ನನ್ನ ಕರ್ತವ್ಯ ಮುಂದುವರಿಸದ್ದೇನೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಅಶ್ರಫ್, ಮನುರಾಜ್, ಶುಬೋದಯ ಆಳ್ವ, ಕೋಡಿಜಾಲ್ ಇಬ್ರಾಹೀಂ, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಟಿ.ಎಂ. ಶಾಹಿದ್ ಮೊದಲಾದವರು ಉಪಸ್ಥಿತರಿದ್ದರು.