ಬಂಟ್ವಾಳ, ಜೂ. 08(DaijiworldNews/AA): ದ್ವಿಚಕ್ರವಾಹನಕ್ಕೆ ಲಾರಿಯೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ, ಸಜೀಪ ಮುನ್ನೂರು ಗ್ರಾಮದ ಕಂದೂರು ಎಂಬಲ್ಲಿ ಇಂದು ಸಂಜೆ ನಡೆದಿದೆ.
ಅಮ್ಟಾಡಿ ಗ್ರಾಮದ ಕಲಾಯಿ ನಿವಾಸಿ ರಾಮನಾಯ್ಕ (47) ಮೃತಪಟ್ಟ ವ್ಯಕ್ತಿ.
ರಾಮನಾಯ್ಕ ಅವರು ಸ್ಕೂಟರ್ನಲ್ಲಿ ಬಿಸಿರೋಡಿನಿಂದ ಮುಡಿಪು ಕಡೆಗೆ ತನ್ನ ವೈಯಕ್ತಿಕ ಕೆಲಸದ ನಿಮಿತ್ತ ತೆರಳುತ್ತಿದ್ದರು. ಈ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಲಾರಿ ಚಾಲಕ ರಾಮನಾಯ್ಕ ಅವರು ತೆರಳುತ್ತಿದ್ದ ಸ್ಕೂಟರ್ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರವಾದ ಏಟಾಗಿ ರಕ್ತಸ್ರಾವ ಉಂಟಾಗಿತ್ತು.
ರಸ್ತೆಯ ಮಧ್ಯ ಭಾಗಕ್ಕೆ ಎಸೆಯಲ್ಪಟ್ಟ ರಾಮನಾಯ್ಕ ಅವರನ್ನು ಪೋಲೀಸರು ಸ್ಥಳಕ್ಕೆ ಬರುವವರೆಗೂ ಸ್ಥಳದಲ್ಲಿದ್ದ ಯಾರು ಮುಟ್ಟಿರಲಿಲ್ಲ. ಸುಮಾರು ಅರ್ಧ ಗಂಟೆಯವರೆಗೆ ರಾಮನಾಯ್ಕ ಅವರ ಮೃತದೇಹ ರಸ್ತೆಯ ಮಧ್ಯ ಭಾಗದಲ್ಲಿತ್ತು ಎನ್ನಲಾಗಿದೆ. ಬಳಿಕ ಪೋಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮನಾಯ್ಕ ಅವರು ಕಳೆದ ಅನೇಕ ವರ್ಷಗಳಿಂದ ಬಂಟ್ವಾಳ ಬೈಪಾಸ್ ನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಮಾಣಿಕ ಕೆಲಸಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎನ್ನಲಾಗಿದೆ.