ಬೆಳ್ತಂಗಡಿ,ಮೇ12(DaijiworldNews/AZM):ಜ್ಯೋತಿಷ್ಯ ಜ್ಞಾನರತ್ನ, ಯಕ್ಷದೇವ ಅನಂತರಾಮ ಬಂಗಾಡಿ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳ್ತಂಗಡಿಯಲ್ಲಿ ಮೃತಪಟ್ಟಿದ್ದಾರೆ.ಅನಂತರಾಮ ಬಂಗಾಡಿಯವರಿಗೆ 68 ವರ್ಷ ವಯಸಾಗಿತ್ತು.
ಬಂಗಾಡಿಯವರು ನೂರೈವತ್ತಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳ ರಚನಾಕಾರರು, ಜ್ಯೋತಿಷಿಗಳು, ಸಾಹಿತಿಗಳು, ಹರಿಕಥಾ ಪ್ರವಚನಕಾರರು, ನಾಟಕ ದಿಗ್ಧರ್ಶಕರು, ತೊಗಲು ಬೊಂಬೆಯಾಟ, ವರ್ಣಾಲಂಕಾರ, ವಸ್ತ್ರಾಲಂಕಾರ, ಪಾಡ್ದನ ಪರಿಣಿತರಾಗಿದ್ದರು.
1951ರ ನವೆಂಬರ್ 14ರಂದು ಬಂಗಾಡಿಯವರು ಜನಿಸಿದ್ದು, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಬಂಗಾಡಿಯಲ್ಲಿ ಪೂರೈಸಿ, ಹೈಸ್ಕೂಲು ವಿದ್ಯಾಭ್ಯಾಸವನ್ನು ಹಾಸನದ ಹೆತ್ತೂರಿನಲ್ಲಿ ಆರಂಭಿಸಿ ಅಲ್ಲಿಯೇ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದ್ದರು.
ನಂತರ ಕವಿ ನೀಲಕಂಠ ಭಟ್ ಶಿರಾಲಿಪಾಲರ ಮಾರ್ಗದರ್ಶನದಲ್ಲಿ ಕನ್ನಡರತ್ನ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ತೇರ್ಗಡೆ ಹೊಂದಿ ಸೀಮಂತೂರು ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನ ಛಂದಸ್ಸನ್ನು ಅಧ್ಯಯನ ಮಾಡಿದ್ದರು.
ಕಾಡ ಮಲ್ಲಿಗೆ, ಕಚ್ಚೂರ ಮಾಲ್ದಿ, ಬೊಳ್ಳಿ ಗಿಂಡೆ, ಪಟ್ಟದ ಪದ್ಮಲೆ ಮುಂತಾದ ಯಶಸ್ವಿ ಪ್ರಸಂಗಗಳನ್ನೊಳಗೊಂಡು ನೂರೈವತ್ತಕ್ಕೂ ಹೆಚ್ಚು ತುಳು ಕನ್ನಡ ಭಾಷೆಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದರು.
ಫಿನ್ ಲ್ಯಾಂಡ್ ಮತ್ತು ಭಾರತದ ಜಾನಪದ ಅಧ್ಯಯನಕ್ಕಾಗಿ ಮತ್ತು ತುಳು ಶಬ್ದಕೋಶ ರಚನೆಗಾಗಿ ತುಳು ನಿಘಂಟು ಕಾರ್ಯಾಗಾರದಲ್ಲಿಯೂ ಸೇವೆ ಸಲ್ಲಿಸಿದ್ದರು.
ಭಾರತೀಯ ಜ್ಯೋತಿಷ್ಯ ಸಂಸ್ಥೆಯಿಂದ “ಜ್ಯೋತಿಷ್ಯ ಜ್ಞಾನರತ್ನ“ ಪ್ರಶಸ್ತಿ, “ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ“, “ಕುಬೆಯೂರು ಪ್ರತಿಷ್ಠಾನ ಯಕ್ಷಗಾನ ಪ್ರಸಂಗ ಸಾಹಿತ್ಯ ಪ್ರಶಸ್ತಿ“, “ಕೊರಗಪ್ಪ ಪ್ರಶಸ್ತಿ ಪ್ರತಿಷ್ಠಾನ ಪುರಸ್ಕಾರ“, “ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ“, “ಪುಳಿಂಚ ರಾಮಯ್ಯ ಶೆಟ್ಟಿ ಪ್ರತಿಷ್ಠಾನ ಪ್ರಶಸ್ತಿ“, “ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನ ಪ್ರಶಸ್ತಿ“, “ವಿಶ್ವ ತುಳು ಸಮ್ಮೇಳನ ಪ್ರಶಸ್ತಿ“, “ತುಳುನಾಡ ಸಿರಿ ಪ್ರಶಸ್ತಿ“, “ಸ್ಕಂದ ಪುರಸ್ಕಾರ” ಮತ್ತು ಇತ್ತೀಚಿಗೆ ದೊರೆತ “ಯಕ್ಷದೇವ ಪ್ರಶಸ್ತಿ“. ಜೊತೆಗೆ ನೂರಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಪುರಸ್ಕರಿಸಿವೆ.
ದಿವಂಗತರು ಪತ್ನಿ ಸುಮತಿ , ಮಗ ಸಂದೇಶ್ ಬಂಗಾಡಿ, ಮಗಳು ಸಂಧ್ಯಾ, ಅಳಿಯ ಹಿರೇಬೆಟ್ಟು ಕೇಶವ ಭಂಡಾರಿ ಮತ್ತು ಮೊಮ್ಮಕ್ಕಳು , ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.