ಕುಂದಾಪುರ , ಜೂ. 07(DaijiworldNews/AA): ಪುರಸಭಾ ವ್ಯಾಪ್ತಿಯ ನಾನಾಸಾಹೇಬ್ ರಸ್ತೆಯ ಶೆಡ್ತಿಕೆರೆ ಕೆರೆ ಹೂಳೆತ್ತುವ ಕಾರ್ಯ ಅರ್ಧಂಬರ್ಧವಾಗಿದ್ದು ಪರಿಸರದ ನಿವಾಸಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪುರಸಭೆ ಈ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಮುಂದಾದಾಗ ಪರಿಸರದ ಜನತೆ ಖುಷಿ ಪಟ್ಟಿದ್ದರು. ಬೇಸಿಗೆಯ ಕೊನೆಯಲ್ಲಿ ಕೆರೆ ಹೂಳೆತ್ತುವ ಕಾರ್ಯವನ್ನು ಪುರಸಭೆ ಆರಂಭಿಸಿತ್ತು. ಕೆಲಸ ಆರಂಭಗೊಂಡ ವೇಗದಂತೆ ಕೆಲಸ ನಡೆಯಲಿಲ್ಲ. ಕೆರೆಯ ಸುತ್ತ ಇದ್ದ ಮರ ಗಿಡಗಂಟಿಗಳನ್ನು ಕಡಿದು ಅಲ್ಲಲ್ಲಿ ಹಾಕಿದರು. ಮತ್ತೆ ವಾರ ಕಳೆದರೂ ಕೂಡಾ ಕೆರೆ ಹೂಳೆತ್ತುವ ಕಾರ್ಯ ನಡೆಯಲಿಲ್ಲ. ಇಂದು ಕೆಲಸ ಮಾಡುತ್ತೇವೆ, ನಾಳೆ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆರೆ ಅಭಿವೃದ್ಧಿಗಾಗಿ ಗಿಡಗಳನ್ನು ಕಡಿದು ಅಲ್ಲಿ ಹಾಕಿದ್ದು, ಕಸ ಎಲ್ಲವೂ ಅಲ್ಲಿಯೇ ಇದ್ದು ವಾರಕ್ಕೂ ಹೆಚ್ಚು ದಿನಗಳಿಂದ ಇರುವುದರಿಂದ ಅವು ಕೊಳೆತು ನಾರುತ್ತಿದೆ. ಕೆರೆಯಲ್ಲಿ ಈ ಹೆಚ್ಚುವರಿ ಕಸಗಳು ಸೇರಿ ಕೊಳೆತು ದುರ್ನಾತ ಬೀರುತ್ತಿದೆ. ಮಾತ್ರವಲ್ಲ ಇದೀಗ ಸೊಳ್ಳೆ ಉತ್ಪಾದನಾ ತಾಣವಾಗಿ ಮಾರ್ಪಟ್ಟಿದೆ.
ಕೆರೆಯ ಸುತ್ತಮುತ್ತ ಹತ್ತಕ್ಕೂ ಹೆಚ್ಚು ಮನೆಗಳಿವೆ. ಪಕ್ಕದಲ್ಲಿ ಅಂಗನವಾಡಿ ಇದೆ. ಜನವಸತಿ ಪ್ರದೇಶ. ಕೆಲಸ ಆರಂಭಿಸಿ ಕಸಕಡ್ಡಿ ಮರದ ಗೆಲ್ಲುಗಳನ್ನು ಇಲ್ಲಿಯೇ ಕೆರೆಯಲ್ಲಿ ಬಿಟ್ಟಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗ ಮಳೆಗಾಲ ಆರಂಭವಾಗಿದೆ. ಕೆರೆ ಅಭಿವೃದ್ಧಿ ಕೆಲಸ ಮುಂದುವರಿಸಲು ಇನ್ನೂ ಮೀನಮೇಷ ಎಣಿಸಿದರೆ ನೀರು ತುಂಬುತ್ತದೆ. ಕೊಳಚೆ ವ್ಯಾಪಕವಾಗಿ ಹರಡುತ್ತದೆ. ಇನ್ನಷ್ಟು ಸಮಸ್ಯೆಗಳು ಉಂಟಾಗುತ್ತದೆ. ಆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಇದೆ. ಆದಷ್ಟು ಬೇಗ ಕೆರೆ ಅಭಿವೃದ್ಧಿಯನ್ನು ಮುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.