ಉಡುಪಿ , ಜೂ. 07(DaijiworldNews/AK): ಉಡುಪಿ ಜಿಲ್ಲೆಯಲ್ಲಿ ಸತತವಾಗಿ ಹೀನಾಯವಾಗಿ ಸೋಲುತ್ತಿರುವ ಉಡುಪಿ ಕಾಂಗ್ರೆಸ್ ತನ್ನ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. . ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಒಂದು ದಿನದ ಬಳಿಕ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ ಭೇಟಿ ಕಾರ್ಯಕ್ರಮ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಜೂನ್ 06 ರಂದು ಉಡುಪಿ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದ ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆ ಬಳಿಕ ಕೊಲ್ಲೂರು ದೇವಸ್ಥಾನಕ್ಕೆ ತೆರಳಿ ಬೆಂಗಳೂರಿಗೆ ಮರಳಿದ್ದಾರೆ. ಆದರೆ ಇವೆಲ್ಲದರ ನಡುವೆ ಉಡುಪಿಯ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡದೇ ಕೇವಲ ನಾಯಕರನ್ನು ಬೇಟಿ ಮಾಡಿ ಹೋಗಿರುವುದು ಇದೀಗ ಜಿಲ್ಲೆಯ ಕಾಂಗ್ರೆಸ್ನ ತಳಮಟ್ಟದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಗೃಹ ಮಂತ್ರಿ ಹಾಗೂ ಇತರ ಸಚಿವರು ಜಿಲ್ಲೆಗೆ ಬರುವಾಗ ಪಕ್ಷದ ಕಾರ್ಯಕರ್ತರಿಗೆ ಮಾಹಿತಿ ಕೊಡದೆ ಕೇವಲ ನಾಯಕರುಗಳು ಫೋಟೋಗೆ ಪೋಸ್ ಕೊಟ್ಟರೆ ಪಕ್ಷ ಸಂಘಟನೆಗೆ ಯಾವುದೇ ಪ್ರಯೋಜನ ಇಲ್ಲ ಎಂದು ಕಾಂಗ್ರೆಸ್ ನ ತಳಮಟ್ಟದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
2013 ರಲ್ಲಿ ನಡೆದ ವಿಧಾನಸಭಾ ಚುನಾವಣೆ ಒಂದು ಬಿಟ್ಟರೆ ಆ ಬಳಿಕ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಯಾವುದೇ ಗಮನಾರ್ಹ ಸಾಧನೆಯನ್ನು ಮಾಡಿಲ್ಲ. ಬಳಿಕ ನಡೆದ 2019 ಮತ್ತು 2024 ರ ಲೋಕಸಭಾ ಚುನಾವಣೆ, 2023 ರ ವಿಧಾನಸಭಾ ಚುನಾವಣೆ ಮಾತ್ರವಲ್ಲದೇ ಉಡುಪಿ ನಗರ ಸಭೆಯ ಉಪ ಚುನಾವಣೆಯಲ್ಲಿ ಕೂಡಾ ಕಾಂಗ್ರೆಸ್ ನೆಲಕಚ್ಚಿದೆ. ಈ ಎಲ್ಲಾ ಸೋಲಿನ ಪರಾಮರ್ಶೆ ಮಾಡುವುದನ್ನು ಹೊರತುಪಡಿಸಿ ಕಾಂಗ್ರೆಸ್ ನ ಹೈ ಕಮಾಂಡ್ ನ ಯಾವುದೇ ನಾಯಕರು ಉಡುಪಿ ಜಿಲ್ಲೆಗೆ ಸೂಕ್ತ ಗಮನವನ್ನೇ ಕೊಡುತ್ತಿಲ್ಲ ಎಂಬ ಆಕ್ರೋಶ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.