ಉಳ್ಳಾಲ: ಜೂ. 07(DaijiworldNews/AA): ಕುಂಪಲದ ಬಾರ್ದೆ ಎಂಬಲ್ಲಿ ಜೂ. 5 ರಂದು ಬಿಜೆಪಿ ಕಾರ್ಯಕರ್ತ ಪಿಟ್ಟಿ ಯಾನೆ ಪ್ರವೀಣ್ ಪೂಜಾರಿ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೂ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಕುಂಪಲ ಗೂ ಯಾವುದೇ ಸಂಬಂಧವಿಲ್ಲ. ಘಟನೆ ಟ್ರಸ್ಟ್ ಕಚೇರಿಯ ಎದುರು ಸಂಭವಿಸಿದೆ ಹೊರತು ಘಟನೆಯಲ್ಲಿ ಟ್ರಸ್ಟ್ ಸದಸ್ಯರು ಭಾಗಿಯಾಗಿಲ್ಲ ಎಂದು ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಕುಂಪಲ ಇದರ ಅಧ್ಯಕ್ಷ ಭಗವಾನ್ ದಾಸ್ ಶೆಟ್ಟಿ ತಿಳಿಸಿದ್ದಾರೆ.
ಕೇಸರಿ ಮಿತ್ರ ವೃಂದಕ್ಕೆ 47 ವರ್ಷಗಳ ಇತಿಹಾಸವಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾಗಿದೆ. ಅಷ್ಟೂ ವರ್ಷಗಳಲ್ಲಿ ರಾಜಕಿಯೇತರವಾಗಿ ಟ್ರಸ್ಟ್ ಕಾರ್ಯಾಚರಿಸುತ್ತಿದೆ. ಸಾಮಾಜಿಕ, ಧಾರ್ಮಿಕ ವಿಚಾರಗಳಲ್ಲಿ ಸಂಸ್ಥೆ ನಿರಂತರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದೆ. ಜೂ.5 ರಂದು ಬಿಜೆಪಿ ಕಾರ್ಯಕರ್ತನಿಗೆ ನಡೆದ ಹಲ್ಲೆ ಪ್ರಕರಣದಲ್ಲಿ ಸಂಸ್ಥೆಯ ಯಾವುದೇ ಸದಸ್ಯರು ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.
ಹಲ್ಲೆಗೊಳಗಾದ ಪ್ರವೀಣ್ ಪೂಜಾರಿ ಹಾಗೂ ಹಲ್ಲೆ ನಡೆಸಿದ ಗೌತಮ್ ಇಬ್ಬರೂ ಜೊತೆಗಿದ್ದವರೇ, ಇಬ್ಬರ ನಡುವಿನ ಗಲಾಟೆ ಟ್ರಸ್ಟ್ ಕಚೇರಿಯ ಮುಂಭಾಗದಲ್ಲಿ ನಡೆದಿದ್ದು, ಅದನ್ನು ತಡೆಯಲು ಕೇಸರಿ ಮಿತ್ರ ವೃಂದದವರು ಪ್ರಯತ್ನಿಸಿದ್ದಾರೆ ಹೊರತು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗುವಂತಹ ಟ್ರಸ್ಟ್ ಕೇಸರಿ ಮಿತ್ರ ವೃಂದವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.