ಉಡುಪಿ, ಜೂ. 05(DaijiworldNews/AK):ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಉಡುಪಿ ಕಾಂಗ್ರೆಸ್ನಲ್ಲಿ ಗೋ ಬ್ಯಾಕ್ ಅಭಿಯಾನ ಆರಂಭವಾಗಿದೆ. ಕಾಂಗ್ರೆಸ್ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಉಡುಪಿಯ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಅಭಿಯಾನ ನಡೆಸುತ್ತಿದ್ದಾರೆ.ಚುನಾವಣೆ ಸಂದರ್ಭದಲ್ಲೂ ಬಂದಿಲ್ಲ, ನೀರಿನ ಸಮಸ್ಯೆಯಾದಾಗಲೂ ಬಂದಿಲ್ಲ. ಇದರಿಂದ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿರುವ ಕಾರ್ಯಕರ್ತರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆ ಆಗ್ರಹಿಸಿದ್ದಾರೆ.
ಇದೀಗ ಗೋ ಬ್ಯಾಕ್ ಸೇರಿದಂತೆ ವಿವಿಧ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವೆಯಾಗಿ ನೇಮಕಗೊಂಡು ಮೊದಲ ಬಾರಿ ಜಿಲ್ಲೆಗೆ ಬಂದಾಗ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಗೆ ಬರುವ, ಉಡುಪಿ ನಗರದಲ್ಲಿ ಮನೆಯೊಂದನ್ನು ಮಾಡುವ ಭರವಸೆ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಇದೀಗ ಮೂರ್ನಾಲ್ಕು ತಿಂಗಳಿನಿಂದ ಜಿಲ್ಲೆಗೆ ಕಾಲಿಡದೇ ಉಡುಪಿಗೆ ತಾನು ಉಸ್ತುವಾರಿ ಸಚಿವೆ ಎಂಬುದನ್ನು ಸಂಪೂರ್ಣ ಮರೆತಂತೆ ಕಾಣುತ್ತಿದೆ.ನೇಮಕಗೊಂಡ ಒಂದೇ ತಿಂಗಳಿಗೆ ತಾನು ನೀಡಿದ ಭರವಸೆ ಮರೆತು ಬಿಟ್ಟಿದ್ದ ಸಚಿವೆ, ತಿಂಗಳಿಗೊಮ್ಮೆ ಬರುವ ಸಂಪ್ರದಾಯ ಹಾಕಿಕೊಂಡರು. ಕೆಡಿಪಿ ಸಭೆ ಕರೆಯಲು ಆರು ತಿಂಗಳು ತೆಗೆದುಕೊಂಡ ಸಚಿವೆ ಕಾರ್ಯವೈಖರಿಗೆ ಅದರಲ್ಲೂ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಷಯದಲ್ಲಿ ಸಚಿವೆ ತೆಗೆದುಕೊಂಡ ನಿಲುವಿಗೆ ಕಾಂಗ್ರೆಸಿಗರೇ ಅಸಮಧಾನ ವ್ಯಕ್ತಪಡಿಸಿದ್ದರು.
ಲೋಕಸಭಾ ಚುನಾವಣೆ ವೇಳೆ ಒಂದು ಬಾರಿ ಸಹ ಜಿಲ್ಲೆಗೆ ಕಾಲಿರಿಸದ ಸಚಿವೆ, ಪುತ್ರನಿಗೆ ಬೆಳಗಾವಿಯಿಂದ ಟಿಕೆಟ್ ಘೋಷಣೆಯಾದ ನಂತರವಂತೂ ಉಡುಪಿಯತ್ತ ಮುಖ ಮಾಡಿಲ್ಲ. ಕುಂದಾಪುರದಲ್ಲಿ ಪಕ್ಷದ ಕಾರ್ಯಕ್ರಮವೊಂದಕ್ಕಾಗಿ ಕಳೆದ ಜ.27ರಂದು ಜಿಲ್ಲೆಗೆ ಬಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಮಾರ್ಚ್ 13ರಂದು ಗ್ಯಾರಂಟಿ ಸಮಾವೇಶದಲ್ಲಿ ಮುಖ್ಯ ಮಂತ್ರಿಗಳೊಂದಿಗೆ ಭಾಗವಹಿಸಿದ್ದೆ ಕೊನೆಯ ಕಾರ್ಯಕ್ರಮ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದರೆ, ಆಕೆಯ ಮಗ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧಿಸಿದ್ದ ಬೆಳಗಾವಿಯಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆದಿತ್ತು.ಆದರೂ ಸಹ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಗೆ ಬರಲೇ ಇಲ್ಲ. ಬೆಳಗಾವಿಯಲ್ಲಿ ಚುನಾವಣೆ ನಡೆದ ಬಳಿಕವಾದರೂ ಜಿಲ್ಲೆಗೆ ಬರಬಹುದಿತ್ತು. ಅದೂ ಬಂದಿಲ್ಲ. ಮೊನ್ನೆ ಮೊನ್ನೆ ನಡೆದ ವಿಧಾನಪರಿಷತ್ನ ನೈರುತ್ಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರಕ್ಕಾದರೂ ಬರಬಹುದಾಗಿತ್ತು. ಅದಕ್ಕೂ ಬಂದಿಲ್ಲ ಎಂಬುದು ಕಾರ್ಯಕರ್ತರ ಆಕ್ರೋಶ.
ತನಗೆ ಉಡುಪಿ ಜಿಲ್ಲೆ ಉಸ್ತುವಾರಿಯ ಜವಾಬ್ದಾರಿಯನ್ನು ಮುಖ್ಯಮಂತ್ರಿ ಗಳು ವಹಿಸಿದ್ದಾರೆ ಎಂಬುದನ್ನೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮರೆತು ಬಿಟ್ಟಿರುವುದಕ್ಕಾಗಿ ಈಗ ಅಭಿಯಾನ ಶುರುವಾಗಿದೆ.