ಕುಂದಾಪುರ, ಜೂ. 05(DaijiworldNews/AA): ಲೈಂಗಿಕ ಕಿರುಕುಳ ಸಹಿತ ವಿವಿಧ ಕಿರುಕುಳದ ಆರೋಪದ ಮೇರೆಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ರಾಬರ್ಟ್ ರೆಬೆಲ್ಲೊ ಅವರನ್ನು ಜೂನ್ 4ರಂದು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ವೈದ್ಯಾಧಿಕಾರಿ ವಿರುದ್ಧ ಆರೋಗ್ಯ ಸಚಿವರಿಗೆ ರೋಗಿಗಳ ಜತೆಗಿನ ದುರ್ನಡತೆಯ ಕುರಿತ ದೂರು ಅರ್ಜಿ, ಇದರೊಂದಿಗೆ ಸಹ ವೈದ್ಯೆಯಿಂದ ಲೈಂಗಿಕ ಕಿರುಕುಳ ಕುರಿತು ದಾಖಲಾದ ಪ್ರಕರಣ, ಕೇಸ್ ಸಂಬಂಧ ಪೊಲೀಸ್ ನಿರೀಕ್ಷಕರಿಂದ ಬಂದ ಪತ್ರ, ಆಸ್ಪತ್ರೆ ಆವರಣದಲ್ಲಿ ಕೊಳಚೆ ನೀರು, ತ್ಯಾಜ್ಯ ಹರಿದು ರೋಗ ಬರಲು ಆಸ್ಪದವಿದ್ದರೂ ನಿರ್ಲಕ್ಷ್ಯ ತೋರಿರುವುದು, ಈ ಎಲ್ಲಾ ಆರೋಪಗಳಿಗಾಗಿ ಇಲಾಖಾ ವಿಚಾರಣೆ ಬಾಕಿ ಇರಿಸಿ ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಇನ್ನು ವೈದ್ಯಾಧಿಕಾರಿಯ ಜೀವನ ನಿರ್ವಹಣೆ ಭತ್ತೆಗಾಗಿ ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯ ಇಎನ್ಟಿ ವೈದ್ಯರ ಹುದ್ದೆಯ ಸ್ಥಳ ನಿಗದಿ ಪಡಿಸಲಾಗಿದೆ. ಆರೋಗ್ಯ ಇಲಾಖೆಯ ಆಯುಕ್ತರ ಅನುಮತಿಯನ್ನು ಪಡೆಯದೇ ಕೇಂದ್ರ ಸ್ಥಳ ತೊರೆಯದಂತೆ ಸೂಚನೆ ನೀಡಲಾಗಿದೆ. ಸದ್ಯ ಡಾ| ರಾಬರ್ಟ್ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.