ಉಡುಪಿ, ಜೂ 04(DaijiworldNews/MS): ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಉಡುಪಿಯ ಸೈಂಟ್ ಸಿಸಿಲಿಸ್ ಶಾಲೆಯಲ್ಲಿ ನಡೆಯುತ್ತಿದ್ದ ಕಾರ್ಯ ಪೂರ್ಣಗೊಂಡಿದ್ದು ಚುನಾವಣೆಯ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಇವಿಎಂ, ವಿವಿಪ್ಯಾಟ್ ಮಷೀನ್ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ವಿವಿಪ್ಯಾಟ್, ಇವಿಎಂ ಯಂತ್ರಗಳನ್ನು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಭದ್ರತಾ ಕೊಠಡಿಗೆ ರವಾನೆ ಮಾಡಲಾಗುತ್ತಿದೆ. ಇಲ್ಲಿ ಸ್ಥಳವನ್ನು ಡಬಲ್ ಲಾಕ್ ಮಾಡಿರಲಾಗುತ್ತದೆ. ಅಲ್ಲದೇ ಇವಿಎಂ ಸಿಸಿಟಿವಿ ಕಣ್ಗಾವಲಿನಲ್ಲಿರುತ್ತದೆ.
ಮತದಾನವಲ್ಲದ ಅವಧಿಯಲ್ಲಿ, ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲಾ ಇವಿಎಂಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡುವುದು ಪದ್ದತಿಯಾಗಿದೆ. ಅವುಗಳನ್ನು ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಅವರ ನೇರ ನಿಯಂತ್ರಣದಲ್ಲಿ ಇರಿಸಲಾಗುತ್ತದೆ. ಶೇಖರಣೆಗೆ ಸರಿಯಾದ ಸ್ಥಳ ಇಲ್ಲದಿದ್ದಾಗ ಕೆಲವೊಂದು ವಿನಾಯಿತಿಯಿದೆ. ಮತದಾನವಲ್ಲದ ಅವಧಿಯಲ್ಲಿ, ಯಾವುದೇ ಕಾರಣಕ್ಕೂ ಇಸಿಐನಿಂದ ನಿರ್ದಿಷ್ಟ ಸೂಚನೆಗಳಿಲ್ಲದೆ, ಇವಿಎಂಗಳನ್ನು ಗೋದಾಮಿನಿಂದ ಹೊರಗೆ ತರುವ ಅವಕಾಶವಿಲ್ಲ.