ಸುಳ್ಯ, ಮೇ.11(Daijiworld News/SS):ಇಲ್ಲಿನ ಅರಣ್ಯ ವಲಯದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ನಾಗರಹೊಳೆ ಅಭಯಾರಣ್ಯದ ವೈದ್ಯರು ಚಿಕಿತ್ಸೆ ನೀಡುವಲ್ಲಿ ಸಫಲರಾಗಿದ್ದು, ಆನೆ ಚೇತರಿಸಿಕೊಳ್ಳುತ್ತಿದೆ.
ಸುಳ್ಯ ತಾಲೂಕಿನ ಬಾಳುಗೋಡು ಮಿತ್ತಡ್ಕ ಕಿರಿಭಾಗ ರಕ್ಷಿತಾರಣ್ಯದಲ್ಲಿ ಗಾಯಗೊಂಡಿದ್ದ ಕಾಡಾನೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಇದನ್ನು ಗಮನಿಸಿದ ನಾಗರಹೊಳೆ ಅಭಯಾರಣ್ಯದ ವೈದ್ಯರು ನೋವಿನಿಂದ ಬಳಲುತ್ತಿದ್ದ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಚಿಕಿತ್ಸೆ ನೀಡಿದ್ದಾರೆ. ಇದೀಗ ಚಿಕಿತ್ಸೆ ಫಲಕಾರಿಯಾಗಿದ್ದು, ಚೇತರಿಸಿಕೊಂಡ ಆನೆ ಎಚ್ಚರಗೊಂಡು ಒಡಾಡಲು ಆರಂಭಿಸಿದೆ ಎಂದು ತಿಳಿದುಬಂದಿದೆ.
ನಾಗರಹೊಳೆ ಅಭಯಾರಣ್ಯದ ವೈದ್ಯಾಧಿಕಾರಿ ಡಾ.ಮುಜೀಬ್, ಗುತ್ತಿಗಾರು ಪಶು ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ, ಸುಳ್ಯ ಎಸಿಎಫ್ ಆಸ್ಟಿನ್ ಸೋನ್ಸ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ್ ಮೊದಲಾದವರ ತಂಡ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಿದ್ದಾರೆ.
ಆನೆಯ ಮುಂಗಾಲಿನಲ್ಲಿ ಗಾಯವಾಗಿದ್ದರಿಂದ ಮುಂಗಾಲನ್ನು ಎತ್ತಿ ಕುಟುಂತ್ತ ನಡೆಯುತ್ತಿತ್ತು. ಇದನ್ನು ಗಮನಿಸಿದ ವೈದ್ಯರು ಅರವಳಿಕೆ ನೀಡಿ, ಗಾಯಕ್ಕೆ ಶುಶ್ರೂಷೆ ನೀಡಿದ್ದಾರೆ. ಆನೆಗೆ 3 ಗಂಟೆ ಜ್ಞಾನ ತಪ್ಪಿಸಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮುಂಭಾಗದ ಎಡಕಾಲಿನಲ್ಲಿದ್ದ ಕೀವನ್ನು ತೆಗೆದು ಗಾಯಕ್ಕೆ ಔಷಧಿ ಹಚ್ಚಿ, ರೋಗ ನಿರೋಧಕ ಚುಚ್ಚುಮದ್ದು ನೀಡಿದ್ದಾರೆ. ಇದೀಗ ಆನೆ ಚೇತರಿಸಿಕೊಳ್ಳುತ್ತಿದೆ.