ಬಂಟ್ವಾಳ, ಮೇ.11(Daijiworld News/SS): ಹಿಂದೂ ಯುವಕನೋರ್ವ ತನ್ನ ಮದುವೆಯ ಹಿನ್ನೆಲೆಯಲ್ಲಿ, ಮುಸ್ಲಿಂ ಗೆಳೆಯರಿಗಾಗಿ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕಿಲ ನಿವಾಸಿ ಧನಂಜಯ್ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಹಿಂದೂ ಮುಸ್ಲಿಮರ ನಡುವೆ ಸೌಹಾರ್ದತೆಗೆ ಸಾಕ್ಷಿಯಾದವರು.
ಧನಂಜಯ್ ಮೇ.10ರಂದು ತನ್ನ ಮದುವೆಯ ಅಂಗವಾಗಿ ಸಂಜೆವೇಳೆ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ಸೌಹಾರ್ದತೆಯ ಇಫ್ತಾರ್ ಕೂಟದಲ್ಲಿ ಕೋಡಪದವು ಹಾಗೂ ಕುಕ್ಕಿಲ ಜಮಾಅತ್ ನ ಸುಮಾರು 150 ಮಂದಿಮುಸ್ಲಿಂ ಸಹೋದರರು ಭಾಗವಹಿಸಿ, ಉಪವಾಸ ತೊರೆದರು.
ಮೇ 8 ರಂದು ಧನಂಜಯ್ ವಿಟ್ಲ ಶ್ರೀರಾಮ ಮಂದಿರದಲ್ಲಿ ಮದುವೆಯಾಗಿದ್ದರು.ಈ ವೇಳೆ ಊರಿನ ಮುಸ್ಲಿಮಂ ಸಮುದಾಯದವರು ಕೇವಲ ಮದುವೆಗೆ ಹೋಗಿ ಶುಭ ಹಾರೈಸಿದ್ದರು. ಆದರೆ ರಂಝಾನ್ ಉಪವಾಸದ ಕಾರಣ ಮದುವೆಯ ಔತಣಕೂಟದಲ್ಲಿ ಅವರು ಭಾಗವಹಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಧನಂಜಯ್ ಕುಕ್ಕಿಲ ಗ್ರಾಮದ ಮಸೀದಿಯಲ್ಲಿ ಮುಸ್ಲಿಮ್ ಸಮುದಾಯದವರಿಗಾಗಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದಾರೆ. ಈ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.