ಮಂಗಳೂರು, ಮೇ.11(Daijiworld News/SS): ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದರಿಂದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ತನ್ನ ಎರಡು ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಬಂಟ್ವಾಳದ ಸರಪಾಡಿಯಲ್ಲಿರುವ ಎಂಆರ್ಪಿಎಲ್ ಡ್ಯಾಂನಿಂದ ಪ್ರತಿದಿನ 6 ಎಂಜಿಡಿ ನೀರು ಪೂರೈಕೆ ಆಗುತ್ತಿತ್ತು. ನೀರು ಕಡಿಮೆಯಾದ ಕಾರಣ ಏಪ್ರಿಲ್ ತಿಂಗಳ ಅಂತ್ಯಕ್ಕೆ 5 ಎಂಜಿಡಿ ನೀರು ಪೂರೈಕೆಯಾಗುತ್ತಿತ್ತು. ಆದರೆ ಈಗ ಡ್ಯಾಂ ಸಂಪೂರ್ಣ ಬರಿದಾದ ಕಾರಣ ಸರಪಾಡಿ ಡ್ಯಾಂನಿಂದ ಎಂಆರ್ಪಿಎಲ್ಗೆ ನೀರು ಸರಬರಾಜು ನಿಂತು ಹೋಗಿದೆ.
ನೀರಿನ ಕೊರೆಯಾಗಿರುವ ಹಿನ್ನೆಲೆಯಲ್ಲಿ, ಫೇಸ್ ಮೂರರ ಕಾರ್ಯನಿರ್ವಹಣೆಯನ್ನು ವಾರ್ಷಿಕ ನಿರ್ವಹಣೆ ನಿಟ್ಟಿನಲ್ಲಿ ಏಪ್ರಿಲ್ ಅಂತ್ಯದಲ್ಲಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಇದೀಗ ನಿರಿನ ಅಭಾವ ಮತ್ತಷ್ಟು ಹೆಚ್ಚಾದ ಕಾರಣ ಮೊದಲ ಘಟಕದ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿದೆ.
ಸದ್ಯ ಮೊದಲನೇ ಮತ್ತು ಮೂರನೇ ಘಟಕ ಸ್ಥಗಿತಗೊಂಡಿದ್ದರೂ ಎರಡನೇ ಘಟಕದ ಮೂಲಕ ತೈಲ ಸಂಸ್ಕರಣೆ ಕಾರ್ಯ ನಡೆಯುತ್ತಿದೆ. ಮಂಗಳೂರಿನಿಂದ ಬರುವ ಕೊಳಚೆ ನೀರನ್ನು ಉಪಯೋಗಿಸಿ ಮತ್ತು ಲಭ್ಯ ಇರುವ ಇತರೆ ನೀರನ್ನು ಬಳಸಿಕೊಂಡು ಈ ಘಟಕ ಕಾರ್ಯನಿರ್ವಹಿಸುತ್ತಿದೆ.
ಈ ಘಟಕ ಕಾರ್ಯನಿರ್ವಹಿಸುತ್ತಿರುವುದರಿಂದ ಡೀಸೆಲ್ ಹಾಗೂ ಪೆಟ್ರೋಲ್ ಉತ್ಪಾದನೆ ಮೇಲೆ ಅಷ್ಟೊಂದು ಕೊರತೆ ಬಾರದು ಎಂದು ಸಂಸ್ಥೆ ಮೂಲಗಳು ತಿಳಿಸಿವೆ.