ಉಡುಪಿ,ಮೇ11(DaijiworldNews/AZM):ಬಿಸಿಲ ಬೇಗೆಯಲ್ಲಿ ಕುದಿಯುತ್ತಿರುವ ಕರಾವಳಿ ಜನರಿಗೆ ನೀರಿನ ಸಮಸ್ಯೆ ತಲೆದೋರಿದ್ದು, ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗೂ ಈ ಹಿನ್ನಲೆ ಕರಾವಳಿಯ ಹೋಟೆಲ್ ಗಳು ವಸತಿಗೃಹಗಳು ಮುಚ್ಚಲ್ಪಟ್ಟು, ಪ್ರವಾಸೋಧ್ಯಮಕ್ಕೆ ತೀವ್ರ ಪೆಟ್ಟಾಗಿದೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ನಾಡಾಗಿರುವ ಉಡುಪಿಗೆ ಪ್ರವಾಸಿಗರು ಬರುವುದರಲ್ಲಿ ಕಮ್ಮಿ ಇಲ್ಲ. ಆದರೆ ಈ ಬಾರಿ ನೀರಿನ ಸಮಸ್ಯೆ ತಲೆದೋರಿದ್ದು, ಪ್ರವಾಸೋಧ್ಯಮಕ್ಕೆ ಏಟು ಬಿದ್ದಿದೆ. ಉಡುಪಿ, ಮಲ್ಪೆ, ಮಣಿಪಾಲ್ ಗಳಲ್ಲಿ ಸಾಕಷ್ಟು ಹೋಟೇಲ್ ಗಳಿದ್ದು ನೀರಿನ ಸಮಸ್ಯೆಯಿಂದ ಇದೀಗ ಮುಚ್ಚುವ ಪರಿಸ್ಥಿತಿಯಲ್ಲಿದೆ. ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯ ಬರಿದಾಗಿರುವುದರಿಂದ ಒಂದು ವಾರದಿಂದ ನಗರಸಭೆಯಿಂದ ನೀರು ಪೂರೈಕೆಯಾಗಿಲ್ಲ. ಈ ಹಿನ್ನಲೆ ಬಹುತೇಕ ಹೋಟೇಲ್ ಗಳು ಟ್ಯಾಂಕರ್ ನೀರನ್ನು ಅವಲಂಭಿಸಲಾಗುತ್ತಿದೆ ಎಂದು ಹೋಟೆಲ್ ಮಾಲಕರು ಹೇಳುತ್ತಿದ್ದಾರೆ.
ಹೋಟೆಲ್ ವೊಂದಕ್ಕೆ ನಿತ್ಯ ಕನಿಷ್ಟ 2 ಟ್ಯಾಂಕರ್ ನೀರು ಬೇಕು. ಆದರೆ ಇದಕ್ಕೆ ಮೂರು ಸಾವಿರದಿಂದ ಐದು ಸಾವಿರ ಭರಿಸಬೇಕಾದ ಕಾರಣ ಲಾಭವೇನು ಕಂಡು ಬರುವುದಿಲ್ಲ. ಹಾಗಾಗಿ ಹೋಟೆಲ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಗುತ್ತದೆ ಎಂದು ಹೋಟೆಲ್ ಮಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಸಿಲ ಬೇಗೆಗೆ ಪರ್ಯಾಯ ನೀರಿನ ಮೂಲಗಳಾದ ಬಾವಿ,ಬೋರ್ ವೆಲ್ ಬರಿದಾಗಿದೆ. ಹಾಗೂ ಟ್ಯಾಂಕರ್ ನೀರಿಗೆ ದುಬಾರಿ ದರ ತೆರಲು ಸಿದ್ಧವಾಗಿದ್ದರೂ ಕೂಡಾ ನೀರಿನ ಮೂಲಗಳೇ ಸಿಗುತ್ತಿಲ್ಲ ಎನ್ನುವ ಆತಂಕ ಕೇಳಿಬರುತ್ತಿದೆ.
ಇನ್ನು ವಸತಿ ಗೃಹಗಳಲ್ಲೂ ನೀರಿನ ಸಮಸ್ಯೆ ತಲೆದೋರಿದ್ದು, ನೀರನ್ನು ಮಿತವಾಗಿ ಬಳಸಿ ಎಂದು ಗ್ರಾಹಕರಿಗೆ ಸೂಚನೆ ನೀಡಲಾಗುತ್ತದೆ. ಈ ನೀರಿನ ಸಮಸ್ಯೆಗಳು ಪರಿಹಾರಗೊಳ್ಳಲು ಮಳೆ ಬಿದ್ದರೆ ಮಾತ್ರ ಸಾಧ್ಯ ಎಂದು ಹೋಟೆಲ್ ಮಾಲಕರು ಹೇಳಿಕೊಳ್ಳುತ್ತಿದ್ದಾರೆ.