ಕುಂದಾಪುರ, ಮೇ 10 (Daijiworld News/SM): ಪಾದಾಚಾರಿಯೊಬ್ಬರಿಗೆ ಅಪರಿಚಿತ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು ಗಂಭೀರ ಗಾಯಗೊಂಡಿದ್ದ ಪಾದಾಚಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟ ಘಟನೆ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕುಂದಾಪುರ ಸಮೀಪದ ಮರವಂತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಪಾದಾಚಾರಿಯನ್ನು ಜಮ್ಮು ಕಾಶ್ಮೀರದ ಮೂಲದ ಕುಲದೀಪ್ ಕುಮಾರ್(31) ಎಂದು ಗುರುತಿಸಲಾಗಿದೆ.
ಕುಲದೀಪ್ ಕುಮಾರ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಸರಕು ಸಾಗಾಟಕ್ಕೆಂದು ಲಾರಿಯಲ್ಲಿ ಬಂದಿದ್ದರು. ಮರವಂತೆಯಲ್ಲಿ ಲಾರಿ ನಿಲ್ಲಿಸಿ ರಸ್ತೆ ದಾಟಲೆಂದು ಹೆದ್ದಾರಿ ಬದಿಯಲ್ಲಿ ನಿಂತಿದ್ದರೆನ್ನಲಾಗಿದೆ. ಇದೇ ಸಂದರ್ಭ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ.
ಅಪಘಾತದಲ್ಲಿ ಕುಲದೀಪ್ ಕುಮಾರ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಗಂಗೊಳ್ಳಿಯ ಜೀವರಕ್ಷಕ ಆಂಬ್ಯುಲೆನ್ಸ್ನಲ್ಲಿ ಕುಂದಾಪುರಕ್ಕೆ ಕರೆದೊಯ್ಯಲಾಗಿದ್ದು, ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ಸೇರುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರ ಸಹಕಾರದಿಂದ ಕಾರು ಪತ್ತೆ:
ಇನ್ನು ಘಟನೆ ನಡೆದ ತಕ್ಷಣ ಸ್ಥಳೀಯರು ಡಿಕ್ಕಿ ಹೊಡೆದು ಪರಾರಿಯಾದ ಕಾರಿನ ಗುರುತನ್ನು ಗಂಗೊಳ್ಳಿ ಪೊಲೀಸರಿಗೆ ತಿಳಿಸಿದ್ದು, ಬೈಂದೂರು ಠಾಣೆಗೆ ಮಾಹಿತಿ ನೀಡಲಾಗಿತ್ತು. ಬೈಂದೂರು ಪೊಲೀಸರು ಅತೀ ವೇಗವಾಗಿ ಬರುತ್ತಿದ್ದ ಭ್ರೀಝಾ ಕಾರನ್ನು ಅಡ್ಡಗಟ್ಟಿ ವಶಕ್ಕೆ ಪಡೆದಿದ್ದಾರೆ. ಕಾರು ಮಹಮ್ಮದ್ ಗೌಸ್ ಹಸನ್ ಎಂಬುವರಿಗೆ ಸೇರಿದ್ದಾಗಿದ್ದು, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.