ಮಂಗಳೂರು, ಮೇ 10(Daijiworld News/SM): ಸೌದಿ ಅರೇಬಿಯಾದಲ್ಲಿ ಅಪಘಾತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮೂಲದ ಶಂಕರ್ ಎಂಬ ಹಿಂದೂ ಸಹೋದರನಿಗೆ ಕರ್ನಾಟಕದ ಕೆ.ಸಿ.ಎಫ್ ತಂಡ ಆಸರೆಯಾಗಿದೆ.
ತಮಿಳುನಾಡಿನ ನಾಗರಕೊಯಿಲ್ ನಿವಾಸಿ ಶಂಕರ್ ವ್ರತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಅವರು ಸೌದಿ ಅರೇಬಿಯಾ ರಾಷ್ಟ್ರಕ್ಕೆ ತಾತ್ಕಾಲಿಕ ವೀಸಾದಲ್ಲಿ ಬಂದು ಒಂದೆರಡು ದಿನಗಳು ಮಾತ್ರ ಕಳೆದಿತ್ತು. ಶಂಕರ್ ಕೆಲಸ ಮಾಡುತ್ತಿದ್ದ ಕಂಪೆನಿಯು ಅವರನ್ನು ಜಿದ್ದಾದಿಂದ ಹಫರುಲ್ ಬಾತಿನ್ ಎಂಬಲ್ಲಿಗೆ ಕಾರಿನಲ್ಲಿ ಕಳುಹಿಸಿತ್ತು.
ಅಂದು ರಾತ್ರಿ ಸುಮಾರು 9ರ ಹೊತ್ತಿಗೆ ಅವರು ಚಲಿಸುತ್ತಿದ್ದ ಕಾರು ಮದೀನಾ ಸಮೀಪದ ಬನಿ ಮುಹಯ್ಯ ಎಂಬಲ್ಲಿ ಘನವಾಹನವೊಂದರ ಹಿಂಬದಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಪಾಕಿಸ್ತಾನದ ಪ್ರಜೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶಂಕರ್ ರವರು ಗಂಭೀರವಾಗಿ ಗಾಯಗೊಂಡು ಅವರನ್ನು ಮದೀನಾದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಜೊತೆಯಲ್ಲಿದ್ದ ಮೋಹನ್ ಎಂಬವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದರು.
ಈ ವಿಷಯ ತಿಳಿದ ಕೆ.ಸಿ.ಎಫ್. ಮದೀನಾ ಮುನವ್ವರ ಸೆಕ್ಟರ್ ತಂಡ ಏಕಾಂಗಿಯಾಗಿ ಅಸಹಾಯಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದ ಶಂಕರ್ ಅವರನ್ನು ಭೇಟಿಯಾಗಿ ಉಪಚರಿಸಿ , ಅವರಿಗೆ ಬೇಕಾಗುವ ಅವಶ್ಯಕತೆಗಳನ್ನು ಪೂರೈಸಿ ಸಾಂತ್ವನ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಕರ್ನಾಟಕದ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಕೆ.ಸಿ.ಎಫ್ ಕಾರ್ಯಕರ್ತರ ಜೊತೆಗೆ ಮದೀನಾದ ಕಿಂಗ್ ಫಹದ್ ಆಸ್ಪತ್ರೆಗೆ ಭೇಟಿ ನೀಡಿ, ಶಂಕರ್ ರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.