ಮಂಗಳೂರು, ಮೇ.10(Daijiworld News/SS): ನೇತ್ರಾವತಿ, ಕುಮಾರಾಧಾರಾ, ಫಲ್ಗುಣಿ ನದಿಗಳಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗಿದೆ. ಕೆಲ ವಾರಗಳೊಳಗೆ ಜಿಲ್ಲೆಯಲ್ಲಿ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕೊರತೆ ಎದುರಾಗಿದೆ. ಇತ್ತ ಕಡೆ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಜಲಕ್ಷಾಮ ಕಾಣಿಸಿಕೊಂಡಿದೆ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರಾದಲ್ಲಿ ನೀರಿನ ಮಟ್ಟ ಕುಸಿದಿದೆ. ಫಲ್ಗುಣಿ ಮತ್ತು ನಂದಿನಿ ನದಿಗಳಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ. ಇದರಿಂದ ನೀರಿಗೆ ಬರ ಉಂಟಾಗಿದೆ.
ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಬಾವಿ, ಕೆರೆಗಳು ನೀರಿಲ್ಲದೆ ಭಣಗುಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಕುಸಿದು ಬೋರ್ವೆಲ್ ಬರಡಾಗಿವೆ. ಹಲವೆಡೆ ಅಡಿಕೆ ತೋಟಗಳು ನೀರಿಲ್ಲದೆ ಕೆಂಪಾಗಿ ತಿಂಗಳು ಕಳೆದಿವೆ. ಗ್ರಾಮಾಂತರ ಪ್ರದೇಶಗಳ ಅನೇಕ ಮನೆಗಳಲ್ಲಿ ನೀರಿಲ್ಲದೆ ಪಕ್ಕದ ಮನೆ ಅಥವಾ ಪಂಚಾಯತ್ನ ಕೊಳವೆ ಬಾವಿಯನ್ನು ಆಶ್ರಯಿಸುತ್ತಿದ್ದಾರೆ.
ವಿಪರ್ಯಾಸವೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿನ ಬರ ದೇವಸ್ಥಾನಗಳಿಗೂ ತಟ್ಟಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಮುಖವಾಗಿದೆ. ಇದರಿಂದಾಗಿ ಈ ನದಿಗಳ ತಟದಲ್ಲಿರುವ ಪುಣ್ಯಕ್ಷೇತ್ರಗಳಲ್ಲಿ ನೀರಿನ ಕೊರತೆ ಎದುರಾಗಿದೆ.
ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಸ್ನಾನಘಟ್ಟದಲ್ಲಿ ಇದೀಗ ನೀರಿನ ಸಮಸ್ಯೆ ಎದುರಾಗಿದೆ. ನದಿಯಲ್ಲಿ ಹರಿಯುವ ನೀರು ಕೊಳಚೆಯಾಗಿದ್ದು, ಭಕ್ತಾಧಿಗಳು ಈ ನೀರಿನಲ್ಲೇ ತಮ್ಮ ಪುಣ್ಯಸ್ನಾನ ನೆರವೇರಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಜಿಲ್ಲೆಯ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೀರಿನ ಕೊರತೆ ಉಲ್ಬಣಗೊಂಡಿದ್ದು, ನಗರದ ಜನತೆ ಪರಿತಪಿಸುವಂತಾಗಿದೆ.