ಉಡುಪಿ, ಮೇ 10 (Daijiworld News/MSP): ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಲ್ಕೂವರೆ ತಿಂಗಳ ಹಿಂದೆ ನಾಪತ್ತೆಯಾಗಿ ಇದೀಗ ಅಳಸಮುದ್ರದಲ್ಲಿ ಅವಶೇಷ ಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ಏಳು ಮಂದಿ ಮೀನುಗಾರ ಕುಟುಂಬಗಳಿಗೆ ರಾಜ್ಯ ಸರಕಾರ ಪ್ರತಿ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರಧನವನ್ನು ಬಿಡುಗಡೆ ಗೊಳಿಸಿ ಆದೇಶ ನೀಡಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ಕರೆದು ಮಾತನಾಡಿದ ಸಚಿವೆ ಜಯಮಾಲಾ, ಮೀನುಗಾರರು ಬದುಕಿರುವ ಬಗ್ಗೆಯಾಗಲಿ ಅಥವಾ ಮೃತಪಟ್ಟಿರುವ ಬಗ್ಗೆಯಾಗಲಿ ಧೃಢವಾಗದ ಕಾರಣ ಇಲಾಖೆಯೂ ಮೀನುಗಾರರನ್ನು ನಾಪತ್ತೆಯಾಗಿದ್ದು ಎಂದು ಪರಿಗಣಿಸಿದ್ದು ಮೀನುಗಾರಿಕೆ ಇಲಾಖೆ ವತಿಯಿಂದ ತಲಾ ಆರು ಲಕ್ಷ ರೂ. ಹಾಗೂ ರಾಜ್ಯ ಸರಕಾರದ ವತಿಯಿಂದ ತಲಾ 4 ಲಕ್ಷ ರೂಪಾಯಿ ಒಟ್ಟಾರೆ 10 ಲಕ್ಷ ರೂ. ಪರಿಹಾರ ಮೊತ್ತವನ್ನು ನೇರವಾಗಿ ನಾಪತ್ತೆಯಾದವರ ಕುಟುಂಬದ ವಾರಸುದಾರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ ರಾಜ್ಯ ಸರ್ಕಾರ ಪರಿಹಾರ ನೀಡಿದಂತೆ ಕೇಂದ್ರ ಸರಕಾರವು ಕೂಡಾ ತಕ್ಷಣ ಪರಿಹಾರ ಒದಗಿಸಬೇಕು ಎಂದು ಕುಟುಂಬರ ಪರವಾಗಿ ಕೇಂದ್ರ ಸಸರ್ಕಾರಕ್ಕೆ ಶಿಫಾರಸ್ಸನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ನಡುವೆ ಪರಿಹಾರದ ಮೊತ್ತವನ್ನು ವರ್ಗಾಯಿಸಲು ಮೀನುಗಾರಿಕಾ ಇಲಾಖೆ ಈಗಾಗಲೇ ವಾರಸುದಾರರಿಂದ ಇಂಡೆಮ್ನಿಟಿ ಬಾಂಡ್ ಮತ್ತು ಇತರೇ ಅವಶ್ಯ ದಾಖಲೆಗಳನ್ನು ಪಡೆದುಕೊಂಡು ವರದಿ ನೀಡುವಂತೆ ಉಡುಪಿ ಹಾಗೂ ಕಾರವಾರದ ಮೀನುಗಾರಿಕಾ ಉಪನಿರ್ದೇಶರಿಗೆ ಮೀನುಗಾರಿಕಾ ಇಲಾಖೆ ಸೂಚಿಸಿದೆ.