ಮಂಗಳೂರು, ಮೇ 10 (Daijiworld News/MSP): ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗುರುವಾರ ಸಂಭ್ರಮದ ಬ್ರಹ್ಮಕಲಶೋತ್ಸವ ನಡೆಯಿತು. ದೇವರ ಬ್ರಹ್ಮಕಲಶೋತ್ಸವ ವೈಭವ ಕಣ್ತುಂಬಿಸಿಕೊಳ್ಳಲು ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದರು.
ನಾಥ ಪಂಥದ ಆರಾಧನಾ ವೈಶಿಷ್ಟ್ಯವನ್ನು ಹೊಂದಿರುವ ಕದ್ರಿ ದೇವಸ್ಥಾನದಲ್ಲಿ ಶ್ರೀ ಮಂಜುನಾಥ ದೇವರಿಗೆ ಗುರುವಾರ ಬೆಳಿಗ್ಗೆ 9.35ರ ಮಿಥುನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕವನ್ನು ವೇದಮೂರ್ತಿ ದೇರೆಬೈಲ್ ವಿಠಲದಾಸ್ ತಂತ್ರಿ ನೆರವೇರಿಸಿದರು.
ಸಹಸ್ರ ತಾಮ್ರ
ಕಲಶದಲ್ಲಿ ಅಭಿಮಂತ್ರಿಸಿದ ಜಲವನ್ನು ತುಂಬಿ ಸಹಸ್ರ ಕಲಶಾಭಿಷೇಕ ನಡೆಸಿದ ಬಳಿಕ ಚಿನ್ನದ ಪೂರ್ಣಕುಂಭವನ್ನು ದೇವಾಲಯಕ್ಕೆ ಪ್ರದಕ್ಷಿಣೆ ತಂದು ಮಂಜುನಾಥ ದೇವರಿಗೆ ದೀರ್ಘ ಹೊತ್ತು ಬ್ರಹ್ಮಕಲಶ ಅಭಿಷೇಕವನ್ನು ಮಾಡಲಾಯಿತು. ಬ್ರಹ್ಮಕಲಶದ ಈ ಮಹಾನ್ ಕ್ಷಣವನ್ನು ಕಣ್ತುಂಬಿ ಕೊಳ್ಳಲು ಪ್ರಾಂಗಣದಲ್ಲಿಯೂ ಭಕ್ತರು ಸೇರಿದ್ದರು. ಪ್ರಾಚೀನ ಮೂರ್ತಿಗಳಿಗೆ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ, ಮಹಾಪೂಜೆ ನಡೆಯಿತು. ಬ್ರಹ್ಮಕಲಶದ ನಂತರ ಮಧ್ಯಾಹ್ನ ಶ್ರೀದೇವರು ರಥಾರೋಹಣಗೊಂಡರು. ಸಂಜೆ ವೇಳೆಗೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಇಂದು ಮಹಾದಂಡರುದ್ರಾಭಿಷೇಕ
ಕದ್ರಿ ಕ್ಷೇತ್ರದಲ್ಲಿ ಮೇ 10 ರಂದು ಮಹಾದಂಡರುದ್ರಾಭಿಷೇಕ ಮಹಾಪೂಜೆ ನಡೆಯಲಿದೆ. ಕದ್ರಿಯಲ್ಲಿರುವ ಗೋಮುಖ ತೀರ್ಥದಿಂದ ಬರುವ ಪವಿತ್ರ ನೀರನ್ನು ಅಡಕೆಯ ದಂಭೆ ಮಾಡಿ ಗೋಮುಖದಿಂದ ನೇರವಾಗಿ ದೇವಾಲಯಕ್ಕೆ ನೀರು ತಂದು ಎದುರು ಭಾಗದಿಂದ ರಸಕೂಪದಲ್ಲಿರುವವ ರುದ್ರಾಕ್ಷನಿಗೆ ನೀರು ಬೀಳುವಂತೆ ಮಾಡುವುದೇ ರುದ್ರಾಭಿಷೇಕದ ವೈಶಿಷ್ಟ್ಯ. ಈ ವಿಶಿಷ್ಟ ಆಚರಣೆ ಕದ್ರಿಯಲ್ಲಿ ಮಾತ್ರ. 13 ವರ್ಷಗಳ ಹಿಂದೆ 2006 ರಲ್ಲಿ ಬ್ರಹ್ಮಕಲಶಾಭಿಷೇಕ ನಡೆದಾಗಲೂ ಮಹಾದಂಡರುದ್ರಾಭಿಷೇಕ ನಡೆದಿತ್ತು.