ಬೆಂಗಳೂರು, ಮೇ 09 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಮಾರು 80 ಕೋಟಿಯ ರೂಪಾಯಿ ವೆಚ್ಚದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕುಕ್ಕೆಯಲ್ಲಿ ನೂತನ ಚಿನ್ನದ ರಥ ನಿರ್ಮಾಣ ಮಾಡಲು ಆದೇಶ ಹೊರಡಿಸಿದ್ದರು. ಆದರೆ ನಂತರದ ದಿನಗಳಲ್ಲಿ ಈ ಪ್ರಸ್ತಾವನೆಯು ನನೆಗುದಿಗೆ ಬಿತ್ತು. ಆದರೆ ಆ ಬಳಿಕರಾಜಗುರು ದ್ವಾರಕನಾಥ್ ಸಲಹೆಯ ಮೇರೆಗೆ ಸಿಎಂ ಕುಮಾರಸ್ವಾಮಿ ಅವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ರಥ ನಿರ್ಮಾಣಕ್ಕೆ ಮರುಜೀವ ನೀಡಿದ್ದರು.
ಮಾತ್ರವಲ್ಲದೆ ದೇವಸ್ಥಾನದ ಭಕ್ತರು ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಹಿಂದಿನ ಸರ್ಕಾರಿ ಆದೇಶಗಳನ್ನು ಹಾಜರುಪಡಿಸಿ, ಯೋಜನೆಗೆ ಮತ್ತೆ ಚಾಲನೆ ನೀಡುವಂತೆಯೂ ಮನವಿ ನೀಡಿದ್ದರು. ಹೀಗಾಗಿ, ಈಗಿನ ಮಾರುಕಟ್ಟೆ ದರದಲ್ಲಿ ಚಿನ್ನದ ದರ, ನಿರ್ಮಾಣ ವೆಚ್ಚ ಎಲ್ಲ ಅಂದಾಜುಗಳನ್ನೂ ಪರಿಷ್ಕರಿಸಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು.
2006ರಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ 240 ಕಿಲೋ ಚಿನ್ನವನ್ನು ಉಪಯೋಗಿಸಿ ರಥ ನಿರ್ಮಿಸಲು ಸರಕಾರವು ಅಂದಾಜುಪಟ್ಟಿ ತಯಾರಿಸಿ ತಾತ್ವಿಕವಾಗಿ ಷರತ್ತು ವಿಧಿಸಿ ಅನುಮತಿ ನೀಡಿತ್ತು. ಆದರೆ ಇದೀಗ ಚಿನ್ನದ ದರ ಗಗನ ಏರಿರುವುದರಿಂದ 80 ಕೋಟಿಯ ರೂಪಾಯಿ ವೆಚ್ಚದಲ್ಲಿ ಸ್ವರ್ಣ ರಥಕ್ಕೆ ಅನುಮೋದನೆ ನೀಡಲಾಗಿದೆ.