ಉಡುಪಿ, ಮೇ 10 (Daijiworld News/MSP): ಉಡುಪಿ ನಗರ ಸೇರಿದಂತೆ ಸುತ್ತ ಮುತ್ತಲ 19 ಗ್ರಾಮಗಳನ್ನು ಸೇರಿಸಿ ಮಾಸ್ಟರ್ ಪ್ಲಾನ್ ತಯಾರಿಸುವ ಸಂಬಂಧ ಸಮಾಜದ ವಿವಿಧ ಕ್ಷೇತ್ರಗಳ ಪರಿಣಿತರೊಂದಿಗೆ ಚರ್ಚಿಸಿ ಯೋಜನೆ ತಯಾರಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಅವರು ಗುರುವಾರ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ನಗರದ ಸರ್ವತೋಮುಖ ಬೆಳವಣಿಗೆಗೆ ದೂರದೃಷ್ಟಿಯುಳ್ಳ ಮಾಸ್ಟರ್ ಪ್ಲಾನ್ ತಯಾರಿಸಬೇಕಿದೆ ಮೂಲ ಸೌಕರ್ಯ, ಸಾರಿಗೆ, ಸಂಚಾರ ವ್ಯವಸ್ಥೆ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಜನಸ್ನೇಹಿ ಅಭಿವೃದ್ಧಿಗೆ ಈ ಮಾಸ್ಟರ್ ಪ್ಲಾನ್ ಮುನ್ನುಡಿಯಾಗಲಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ವಿಸ್ತೃತವಾದ ಕಾರ್ಯಾಗಾರ ನಡೆಸಿ, ಸಲಹೆ ಅಭಿಪ್ರಾಯ ಪಡೆಯಲು ಜಿಲ್ಲಾಧಿಕಾರಿ ತಿಳಿಸಿದರು.
ಮಾಸ್ಟರ್ ಪ್ಲಾನ್ ಮೊದಲ ಹಂತವಾಗಿ ದತ್ತಾಂಶ ಮತ್ತು ಸಾಂಖ್ಯಿಕ ಮಾಹಿತಿ, ಸಾಮಾಜಿಕ ಅಂಕಿ ಅಂಶಗಳ ವಿವರಗಳನ್ನು ಸಂಗ್ರಹಿಸಲಾಗುವುದು. ಈ ಅಂಕಿಅಂಶಗಳನ್ನು ಆಧರಿಸಿ ಮಾಸ್ಟರ್ ಪ್ಲಾನ್ ವ್ಯವಸ್ಥಿತ ರೂಪ ನೀಡಲಾಗುವುದು ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
ನಗರದ ವ್ಯವಸ್ಥಿತ ಬೆಳವಣಿಗೆ ದೃಷ್ಟಿಯಿಂದ ಇಂಜಿನಿಯರ್ಗಳು, ಆರ್ಕಿಟೆಕ್ಟ್ಗಳು, ವೈದ್ಯಕೀಯ ಕ್ಷೇತ್ರದ ಗಣ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣಿತರನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಅವರು ತಿಳಿಸಿದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ವಸತಿ, ವಿದ್ಯುತ್ ಸೌಲಭ್ಯಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಆದ್ಯತೆ ನೀಡಲಿದೆ ಎಂದರು.