ಮಂಗಳೂರು, ಮೇ 09(Daijiworld News/SM): ಸ್ಮಾರ್ಟ್ಸಿಟಿ ಯೋಜನೆ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಸಸಿಕಾಂಟ್ ಸೆಂಥಿಲ್ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಿತು. ಯೋಜನೆಯಡಿಯಲ್ಲಿ ಸ್ಮಾರ್ಟ್ ರಸ್ತೆ ಸೇರಿದಂತೆ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದರು.
ನಗರದಲ್ಲಿ ಸ್ಮಾರ್ಟ್ ಸಿಟಿಯಡಿ ರಸ್ತೆಗಳು ನಿರ್ಮಾಣವಾಗುವುದರಿಂದ ಮತ್ತೆ ರಸ್ತೆ ಅಗೆಯಲು ಅವಕಾಶ ಕಲ್ಪಿಸಬಾರದು. ಈ ಹಿನ್ನೆಲೆಯಲ್ಲಿ ಕೆಲವೊಂದು ಇಲಾಖೆಗಳು ಎಚ್ಚರಿಕೆ ವಹಿಸಬೇಕು. ರಸ್ತೆ ನಿರ್ಮಾಣಾ ಪ್ರದೇಶದಲ್ಲಿ ಮೆಸ್ಕಾಂ, ಕೆಯುಐಡಿಎಫ್ಸಿ ಮತ್ತು ಕೆಪಿಟಿಸಿಎಲ್, ನೀರು ಸರಬರಾಜು ಪೈಪ್ ಗಳಿದ್ದರೆ ಅವುಗಳನ್ನು ಪರಿಶೀಲನೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕು. ಆ ಮೂಲಕ ಸಮನ್ವಯಕ್ಕೆ ಕ್ರಮಕೈಗೊಳ್ಳಬೇಕೆಂದರು.
ವಿವಿಧ ಸಂಸ್ಥೆಗಳು ಒಂದೇ ಕಾಮಗಾರಿಯನ್ನು ಹಲವು ಬಾರಿ ಮಾಡಲು ಅವಕಾಶ ನೀಡಬಾರದು. ಕಾಮಗಾರಿ ಪೂರ್ಣಗೊಂಡ ಬಳಿಕ ಅಗೆಯುವುದಕ್ಕೆ ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ಎಲ್ಲರು ಸಮನ್ವಯ ಸಾಧಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಪಾಲಿಕೆಯು ಸಮಯ ಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.
ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುವ ರಸ್ತೆಗಳು ಜನರ ಹಿತವನ್ನು ಕಾಯ್ದುಕೊಳ್ಳುವಂತಿರಬೇಕೇ ಹೊರತು ವಾಹನಗಳಿಗೆ ಪೂರಕವೆಂಬತೆ ಮಾಡಬಾರದು. ಫುಟ್ಪಾತ್ಗಳಲ್ಲಿ ಯಾವುದೇ ಕಾರಣಕ್ಕೂ ವಾಹನಗಳ ಪಾರ್ಕಿಂಗ್ಗೆ ಅವಕಾಶ ನೀಡಬಾರದು ಎಂಬುವುದಾಗಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.