ಕಡಬ, ಮೇ 09(Daijiworld News/SM): ಉರುಳು ಸೇವೆ, ನಾಗದೋಷ ನಿವಾರಣೆಗೆ ಹರಕೆ ಇವುಗಳು ಹಿಂದೂ ಧರ್ಮದ ಆಚರಣೆಯಲ್ಲಿ ಕಂಡು ಬರುತ್ತವೆ. ಆದರೆ, ಇಲ್ಲೊಂದು ಕ್ರೈಸ್ತ ಪುಣ್ಯ ಕ್ಷೇತ್ರದಲ್ಲಿ ಇಂತಹದೊಂದು ವಿಶೇಷ ಆಚರಣೆ ನಡೆಯುತ್ತಿವೆ. ದ.ಕ. ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಸೆಂಟ್ ಜಾರ್ಜ್ ಆರ್ಥೋಡೋಕ್ಸ್ ಸಿರಿಯನ್ ಚರ್ಚ್ ವಿಶಿಷ್ಟ ಆಚರಣೆ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದೆ.
ಇಲ್ಲಿ ಪ್ರತಿವರ್ಷ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಜಾತಿ-ಧರ್ಮದ ಹಂಗಿಲ್ಲದೇ ಕರಾವಳಿಯ ಜೊತೆಗೆ ರಾಜ್ಯ ಹೊರ ರಾಜ್ಯದ ನಾನಾ ಭಾಗದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿ ನೆಲೆನಿಂತಿರೋ ಯೇಸುಸ್ವಾಮಿ ಪವಾಡಗಳನ್ನು ನಡೆಸೋ ಮೂಲಕ ಲಕ್ಷಾಂತರ ಜನರ ಬದುಕಲ್ಲಿ ಬೆಳಕು ಮೂಡಿಸಿದ್ದಾನೆ ಎನ್ನುವುದು ಸರ್ವಧರ್ಮದ ಭಕ್ತರ ನಂಬಿಕೆಯಾಗಿದೆ. ವಾರ್ಷಿಕ ಜಾತ್ರಾಮಹೋತ್ಸವದಲ್ಲಿ ಭಾಗವಹಿಸುವ ಜನಸ್ತೋಮವೇ ಇದಕ್ಕೆ ಸಾಕ್ಷಿ ಎನಿಸುತ್ತದೆ. ವರ್ಷವಿಡಿ ತಾವು ಹೊತ್ತುಕೊಂಡ ಹರಕೆಗಳು, ಆಶೋತ್ತರಗಳನ್ನು ಈ ಕ್ಷೇತ್ರದಲ್ಲಿನ ಯೇಸು ಸ್ವಾಮಿ ಈಡೇರಿಸುವುದರಿಂದ ವಾರ್ಷಿಕ ಜಾತ್ರೆಯ ಸಂದರ್ಭ ಭಕ್ತರ ದಂಡು ಕ್ಷೇತ್ರದತ್ತ ಹೆಜ್ಜೆ ಹಾಕುತ್ತದೆ. ಹಾಗೂ ತಾವು ಹೊತ್ತ ಹರಕೆಗಳನ್ನು ಸಲ್ಲಿಸುತ್ತಾರೆ.
ಉರುಳು ಸೇವೆ ಇಲ್ಲಿನ ವಿಶೇಷತೆ:
ಸಾಮಾನ್ಯವಾಗಿ ಕ್ರೈಸ್ತರ ಪುಣ್ಯಕ್ಷೇತ್ರದಲ್ಲಿ ಅವರದ್ದೇ ಆದ ರೀತಿಯಲ್ಲಿ ಪ್ರಾರ್ಥನೆಗಳು ನಡೆಯುತ್ತವೆ. ಕ್ಯಾಂಡಲ್ ಬೆಳಗುವ ಮೂಲಕ ಹರಕೆಗಳನ್ನು ಸಲ್ಲಿಸುತ್ತಾರೆ. ಆದರೆ, ಇಚ್ಲಂಪಾಡಿಯ ಪುಣ್ಯಕ್ಷೇತ್ರದಲ್ಲಿ ಮಾತ್ರ ವೈಶಿಷ್ಟ್ಯ ಪೂರ್ಣ ಆಚರಣೆಗಳಿವೆ. ಹಿಂದೂ ಧರ್ಮದಲ್ಲಿಯೇ ಅಪರೂಪ ಎಂಬಂತೆ ಕಂಡು ಬರುವ ಉರುಳು ಸೇವೆಯಂತಹ ಆಚರಣೆ ಇಲ್ಲಿನ ವಿಶೇಷತೆಯಾಗಿದೆ. ವಿವಿಧ ಹರಕೆಗಳನ್ನು ಹೊತ್ತುಕೊಂಡಿರುವ ಭಕ್ತರು ವಾರ್ಷಿಕ ಜಾತ್ರೆಯ ಸಂದರ್ಭ ಕ್ಷೇತ್ರಕ್ಕೆ ಆಗಮಿಸಿ ಉರುಳು ಸೇವೆಯ ಹರಕೆಯನ್ನು ಪೂರೈಸುತ್ತಾರೆ. ಜಾತಿ, ಧರ್ಮ ಮರೆತೆ ಎಲ್ಲಾ ವರ್ಗದ ಭಕ್ತರು ತಾವು ಹೊತ್ತುಕೊಂಡ ಉರುಳುಸೇವೆಯ ಹರಕೆಯನ್ನು ಪೂರೈಸುತ್ತಾರೆ.
ನಾಗಕ್ಷೇತ್ರವಲ್ಲ ಆದರೆ ನಾಗದೋಷ ನಿವಾರಣೆ:
ಕ್ಷೇತ್ರದ ಮತ್ತೊಂದು ವಿಶೇಷವೆಂದರೆ, ನಾಗದೋಷ ಇರುವವರು ದೋಷ ನಿವಾರಣೆಗೆ ಕ್ಷೇತ್ರಕ್ಕೆ ಹರಕೆ ಸಲ್ಲಿಸುತ್ತಾರೆ. ಕೈಸ್ತರು ಸೇರಿದಂತೆ ಇತರ ಧರ್ಮದ ಭಕ್ತರು ನಾಗದೋಷ ನಿವಾರಣೆಗೆ ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ. ಇನ್ನು ಉರುಳು ಸೇವೆ ಮಾತ್ರವಲ್ಲದೆ ಮೊಣಕಾಲಲ್ಲಿ ನಡಿಗೆ ಹಾಗೂ ತಲೆಯಲ್ಲಿ ಕಲ್ಲು ಹೊತ್ತುಕೊಂಡು ನಡೆದುಕೊಂಡು ಪ್ರಾರ್ಥನೆ ಸಲ್ಲಿಸುವುದು ಕೂಡ ಇಲ್ಲಿನ ಮತ್ತೊಂಡು ವಿಶೇಷ ಸೇವೆಯಾಗಿದೆ.
ಬೇರೆಲ್ಲೂ ಕಾಣ ಸಿಗದ ಸಂಸ್ಕೃತಿ ಇಲ್ಲಿ ಆಚರಣೆಯಲ್ಲಿದ್ದು, ಜಾತ್ರೆಯ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸೋ ಭಕ್ತಾಧಿಗಳಿಗೆ ಅಕ್ಕಿ ರೊಟ್ಟಿ ಮತ್ತು ಕೋಳಿ ಪಲ್ಯವನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಸ್ಥಳೀಯ ಸರ್ವಧರ್ಮದ ಜನತೆ ಈ ಪ್ರಸಾದವನ್ನು ತಯಾರಿಸುವುದು ಮತ್ತೊಂದು ವಿಶೇಷತೆ.
ಒಟ್ಟಿನಲ್ಲಿ ಆಚಾರ ವಿಚಾರಗಳು ಮರೆಯಾಗುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಹಲವು ವಿಶೇಷತೆಗಳನ್ನೊಳಗೊಂಡ ಆಚರಣೆಗಳು ಕರಾವಳಿಯಲ್ಲಿ ಇಂದಿಗೂ ಉಳಿದಿರುವುದು ದೇವರ ಮೇಲೆ ಭಕ್ತರಿಗಿರುವ ನಂಬಿಕೆ ಏನು ಅನ್ನೋದನ್ನು ತೋರಿಸುತ್ತಿದ್ದು, ಇಂಚ್ಲಂಪಾಡಿಯ ಕ್ಷೇತ್ರ ಇವುಗಳಿಗೆ ಕನ್ನಡಿಯಂತಿದೆ.