ಉಡುಪಿ, ಮೇ09(Daijiworld News/SS): ಕರಾವಳಿಯ ಗಂಡುಕಲೆ ಯಕ್ಷಗಾನದ ವೇಷಧಾರಿಗಳೊಂದಿಗೆ ಮದುವೆ ಮನೆಗೆ ನೂತನ ವಧುವರರು ಆಗಮಿಸಿದ ಅಪರೂಪದ ಪ್ರಸಂಗವೊಂದು ನಡೆದಿದೆ.
ಉಡುಪಿಯ ಶೇಷ ಶಯನ ಸಭಾಭವನದಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ ನೂತನ ವಧುವರರು ಯಕ್ಷಗಾನದ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಮದುವೆ ಮನೆಗೆ ಪ್ರವೇಶ ಮಾಡಿದ್ದಾರೆ. ಬಡಗು ತಿಟ್ಟು ವೇಷಧಾರಿಗಳ ಜೊತೆ ವಧು ವರ ಆಗಮಿಸಿದ್ದು, ಎಲ್ಲೆಡೆ ಸುದ್ದಿಯಾಗಿದೆ.
ಶಾಸ್ತ್ರೋಕ್ತವಾಗಿ ವಾದ್ಯ-ಘೋಷಗಳೊಂದಿಗೆ ಮದುವೆ ಮನೆಗೆ ಆಗಮಿಸಬೇಕಾಗಿದ್ದ ವಧುವರರು ಈ ಬಾರಿ ಚೆಂಡೆಯ ನಾದಕ್ಕೆ ತಕ್ಕಂತೆ ಶಾಸ್ತ್ರೀಯ ಯಕ್ಷಗಾನದ ಸ್ಟೆಪ್ ಹಾಕಿ ವರನ ಜೊತೆ ವಧು ಸಾಗಿದ್ದಾಳೆ.
ಒಂದೆಡೆ ಈ ಅಪರೂಪದ ಮದುವೆಗೆ ಪ್ರಶಂಸೆಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಈ ಮದುವೆ ವಿರುದ್ದ ಯಕ್ಷಗಾನ ಪ್ರೇಮಿಗಳು ಗರಂ ಆಗಿದ್ದಾರೆ. ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ತನ್ನದೇ ಆದ ಒಂದು ವಿಶೇಷವಾದ ಸ್ಥಾನಮಾನ ಇದ್ದು, ಈ ರೀತಿಯ ಸಮಾರಂಭಗಳಿಗೆ ಬಳಸುವ ಮೂಲಕ ಯಕ್ಷಗಾನಕ್ಕೆ ಅವಮಾನ ಮಾಡಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.