ಉಡುಪಿ, ಮೇ 09 (Daijiworld News/MSP): ಉಡುಪಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು ಮೇ ೦೯ರ ಬಜೆ ಡ್ಯಾಂ ನಲ್ಲಿ ನೀರಿನ ಹರಿವು ಹೆಚ್ಚಿಸುವ ಸಲುವಾಗಿ ಶಾಸಕರಾದ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ನಾಗರಿಕರಿಂದ ಶ್ರಮದಾನ ನಡೆಯುತ್ತಿದೆ. ಬಜೆ ಡ್ಯಾಂ ನಲ್ಲಿ ನೀರಿನ ಮಟ್ಟ ಇದ್ದರೂ ಕೂಡ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇರುವ ನೀರನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಶಾಸಕರ ಸೂಚನೆಯಂತೆ ಶಾಸಕರ ಜೊತೆಗೆ ನಾಗರಿಕರು ಕೂಡ ಶ್ರಮದಾನದಲ್ಲಿ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಬಜೆ ಡ್ಯಾಂ ನಲ್ಲಿ ನೀರಿನ ಸಮಸ್ಯೆ ಉಂಟಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅನೇಕ ಬಾರಿ ಈ ಬಗ್ಗೆ ಗಮನಕ್ಕೆ ತಂದರು ಕೂಡ ಇತ್ತ ಕಡೆ ಗಮನ ಹರಿಸಲಿಲ್ಲ. ಅದರ ಪರಿಣಾಮವಾಗಿ ಇಂದು ನಾವು ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದರು. ಅದೇ ರೀತಿ ಈಗಾಗಲೇ ನಗರಸಭಾ ಸದಸ್ಯರು ಮತ್ತು ನಾವುಗಳು ಸೇರಿ ಎಲ್ಲಾ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಬಜೆ ಡ್ಯಾಂ'ಗೆ ನೀರು ಹರಿದು ಬರುವ ಪ್ರದೇಶಗಳಲ್ಲಿ ಅಡೆತಡೆ ಇದ್ದು ನೀರು ಸರಿಯಾಗಿ ಹರಿಯುತ್ತಿಲ್ಲ, ಅದಕ್ಕಾಗಿ ಇಂದು ನಾವು ಈ ಶ್ರಮದಾನದ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು, ಕಾರ್ಯಕರ್ತರು ಮತ್ತು ನಾಗರಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.