ಉಡುಪಿ, ಮೇ 09 (Daijiworld News/MSP): ಕಳೆದ ವರ್ಷ ಅಕ್ಟೋಬರ್ ನಲ್ಲಿ ಆರಂಭವಾದ ಕಡಿಯಾಳಿ- ಪರ್ಕಳ ರಾಷ್ಟ್ರೀಯ ಹೆದ್ದಾರಿ 169 ಎ ಅಗಲೀಕರಣ ಹಾಗೂ ಕಾಂಕ್ರೀಟಿಕರಣವು ಜನನ ಭರದಿಂದ ಸಾಗಿದೆ. ಆದರೆ ವಾಹನಗಳ ಸುಗಮ ಸಂಚಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೆ ಪಾದಚಾರಿಗಳು, ವಾಹನ ಚಾಲಕರು ಪರದಾಡುವಂತಾಗಿದೆ. ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಪ್ರತಿ ದಿನ ಟ್ರಾಫಿಕ್ ಸಮಸ್ಯೆ ಕೂಡ ಆಗುತ್ತಿದೆ.
ಮಣಿಪಾಲ ಜಂಕ್ಷನ್ ಅಪಾಯಕಾರಿ : ಹೌದು ಹಿಂದೆ ಟೈಗರ್ ಸರ್ಕಲ್ ಇದ್ದುದರಿಂದ ಪಾದಚಾರಿಗಳಿಗೆ, ವಾಹನ ಚಾಲಕರಿಗೆ ಅನುಕೂಲವಾಗಿತ್ತು. ಆದರೆ ರಸ್ತೆ ಕಾಮಗಾರಿ, ಅಗಲೀಕರಣಕ್ಕಾಗಿ ಅದನ್ನು ತೆರವು ಗೊಳಿಸಲಾಗಿದೆ. ಈ ಹಿಂದೆ ಅಲ್ಲಿ ಎಚ್ಚರಿಕೆ ಸೂಚನಾ ಪಲಕಗಳಿದ್ದು , ಇದೀಗ ಅದೂ ಕೂಡ ಇಲ್ಲವಾಗಿದ್ದು ವಾಹನ ಸವಾರಿಗೆ ಅಪಾಯ ತಂದೊಡ್ಡುತ್ತಿದೆ.
ಮಣಿಪಾಲ ಎಂದರೆ ಸದಾ ಜನದಟ್ಟಣೆಯಿಂದ ಗಿಜಿ ಗುಡುತ್ತಿರುವ ಪ್ರದೇಶ. ಒಂದೆಡೆ ಆಸ್ಪತ್ರೆ, ಇನ್ನೋದೆಡೆ ವಿದ್ಯಾಸಂಸ್ಥೆಗಳು, ವಾಣಿಜ್ಯ ಕಟ್ಟಡಗಳ ದರ್ಬಾರು. ಒಂದೊಮ್ಮೆ ಮಣಿಪಾಲಕ್ಕೆ ಬಂದಿಳಿದ ಹೊಸಬರಿಗೆ ಹೇಗೆ ರಸ್ತೆ ದಾಟಬೇಕೆನ್ನು ಗೊಂದಲ ಸದಾ ಕಾಡತೊಡಗುತ್ತದೆ. ಇನ್ನೊಂದೆಡೆ ವೃದ್ದರಿಗೆ, ವಿಕಲಾಂಗರಿಗೆ ಮಕ್ಕಳಿಗೆ ಯಾರದ್ದಾದರೂ ಸಹಾಯವಿಲ್ಲದೆ ದಾಟಲಾಗದ ದ್ವಂದ್ವ ಪರಿಸ್ಥಿತಿ. ಇದಲ್ಲದೆ ಇನ್ನು ಶಾಲೆಗಳು ಪುನಾರಂಭವಾಗಲು ಕೇವಲ 20 ದಿನಗಳಿವೆ. ಮಕ್ಕಳ ಸಂರಕ್ಷಣೆಯ ದೃಷ್ಟಿಯಿಂದ ರಸ್ತೆ ಕಾಮಗಾರಿ ಅದರೊಳಗೆ ಮುಗಿಸಬೇಕಾಗಿದೆ. ಇಲ್ಲವಾದರೆ ಮಳೆಗಾಲದಲ್ಲಿ ಇನ್ನಷ್ಟು ತೊಂದರೆ ಕಟ್ಟಿಟ್ಟಬುತ್ತಿ.
ಮೂರು ಜೀವಗಳ ದುರ್ಮರಣ: ಅಪಘಾತ ಸಂಖ್ಯೆ ಏರಿಕೆ : ರಸ್ತೆ ಅಗಲೀಕರಣದ ಕೆಲಸ ಪ್ರಾರಂಭವಾದ ದಿನದಿಂದ ಪ್ರತಿನಿತ್ಯ ಕಾರು, ಬೈಕು, ಪಾದಚಾರಿಗಳಿಗೆ ಒಂದಲ್ಲಾ ರೀತಿಯಲ್ಲಿ ಅಪಘಾತ ಸಂಭವಿಸಿ ಮೂಳೆ ಮುರಿತಕ್ಕೆ ಒಳಗಾಗಿ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಅಲ್ಲದೆ ಸಂಚಾರ ದಟ್ಟನೆ ಇರುವ ಅವಧಿಯಲ್ಲಿ ಹಾಗೂ ರಾತ್ರಿ ವೇಳೆಯಲ್ಲಿ ಇಲ್ಲಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತವೆ. ರಸ್ತೆ ದಾಟುವ ಸಮಯದಲ್ಲಿ ಕಡಿಯಾಳಿ- ಮಣಿಪಾಲ ಹೆದ್ದಾರಿಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಅದೆಷ್ಟೋ ರಾತ್ರಿ ನಡೆಯುವ ಅಪಘಾತ ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತವೆ.
ಇದರೊಂದಿಗೆ ಕಾಮಗಾರಿ ಪ್ರಾರಂಭವಾದಾಗಿನಿಂದ ರಸ್ತೆ ಅಗಲೀಕರಣಕ್ಕಾಗಿ ಅಲ್ಲಲ್ಲಿ ಕೇಬಲ್ ವಯರ್, ಚರಂಡಿಯನ್ನು ಇಷ್ಟ ಬಂದಂತೆ ಅಗೆಯಲಾಗಿದ್ದು, ಕೆಲವಡೆ ಚರಂಡಿಯನ್ನೇ ಮುಚ್ಚಲಾಗಿದೆ. ಅವ್ಯವಸ್ಥೆಯ ಗೂಡಾಗಿರುವ ಇಲ್ಲಿ ವಾಹನ ಚಾಲಕರಿರು ಮನಸ್ಸಿಗೆ ಬಂದಂತೆ ವಾಹನಗಳನ್ನು ಪಾರ್ಕ್ಮಾಡು ಹೋಗುವುದು ಮತ್ತೊಂದು ಸಮಸ್ಯೆಯಾಗಿದೆ.
ಅವೈಜ್ಞಾನಿಕ ಯು ಟರ್ನ್ ಗಳು ಜೀವಕ್ಕೆ ಕುತ್ತು: ಕಡಿಯಾಳಿಯಿಂದ ಹಿಡಿದು ಮಣಿಪಾಲದವರೆಗೆ ಅಲ್ಲಲ್ಲಿ ಅವೈಜ್ಞಾನಿಕ ಯು ಟರ್ನ್ ಗಳು ತೆರೆಯಲಾಗಿದೆ. ಜನರ ಸುರಕ್ಷತೆಯನ್ನು ಕಾಪಾಡಲು ಬ್ಯಾರಿಕೇಡ್ ಹಾಕಲಾಗಿದೆ, ಆದರೆ ಇದು ಶಾಶ್ವತ ಪರಿಹಾರ ಅಲ್ಲ. ಅಲ್ಲದೆ ಲಕ್ಷ್ಮೀಂದ್ರ ನಗರದಿಂದ ಸಿಂಡಿಕೇಟ್ ಸರ್ಕಲ್ ತಿರುವು ಅಪಾಯಕಾರಿ ಯಾಗಿದೆ. ಸ್ಪಲ್ಪ ಎಡವಿದರೂ ನಮ್ಮ ಜೀವಕ್ಕೆ ಕುತ್ತು ಬರಬಹುದು. ತಿರುವಿನಲ್ಲೇ ಹಾಕಿ ಮಣ್ಣಿನ ರಾಶಿ ಕೂಡ ಸಮಸ್ಯೆ ಉಂಟು ಮಾಡುತ್ತಿದೆ. ಕಳಪೆ ಮಟ್ಟದ ಕಾಂಕ್ರೀಟ್ ರಸ್ತೆ ಈಗಾಗಲೇ ಬಿರುಕು ಗಳು ಕಾಣಿಸಿಕೊಂಡಿವೆ.
ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪತಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಉಡುಪಿ - ಮಣಿಪಾಲ ರಸ್ತೆಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ಪರಿಶೀಲಿಸಿ, ರಸ್ತೆ ಕಾಮಗಾರಿಯನ್ನು ತ್ವರಿತಗೊಳಿಬೇಕು. ಚರಂಡಿ ಹಾಗೂ ಸುರಕ್ಷತಾ ಕಾಮಗಾರಿಯನ್ನು ಮಳೆಗಾಲ ಆರಂಭವಾಗುವುದರ ಒಳಗೆ ಪೂರ್ಣಗೊಳಿಸಲು ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಸಾಕಷ್ಟು ಕಡೆ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ರಸ್ತೆಯಲ್ಲಿ ಸರಿಯಾದ ರಿಫ್ಲೆಕ್ಟರ್ ಹಾಗೂ ಫಲಕಗಳನ್ನು ಅಳವಡಿಸದೆ ಜೀವಕ್ಕೆ ಅಪಾಯ ಒದಗಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳು ಕೂಡಲೇ ಕಾರ್ಯಪ್ರವೃತ್ತವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಹೆದ್ದಾರಿಗಳಲ್ಲಿ ಮಳೆಗಾಲದಲ್ಲಿ ಯಾವುದೇ ರೀತಿ ಜಿಲ್ಲೆಯ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ. ಆದರೆ ತತ್ ಕ್ಷಣದ ಪರಿಹಾರವಾಗಿ ವಾಹನದ ವೇಗ ನಿಯಂತ್ರಿಸಲು ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಬ್ಯಾರಿಕೇಡ್ ಗಳನ್ನು ಅಳವಡಿಸುವುದು ಅಗತ್ಯವಾಗಿದೆ.
ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು:
- - ಯು ಟರ್ನ್ ಗಳಲ್ಲಿ ರಿಪ್ಲೆಕ್ಟರ್ ಮತ್ತು ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸಬೇಕು
- - ಖಾಲಿ ಬಿಟ್ಟ ಡಿವೈಡರ್ ಗಳಿಗೆ ಸರಿಯಾದ ವ್ಯವಸ್ಥೆ ಮಾಡಬೇಕು
- - ಇಂದ್ರಾಳಿ ಹಾಗೂ ಇತರ ತಿರುವುಗಳಲ್ಲಿ ಸುಗಮ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಬೇಕು
- - ರಸ್ತೆ ಮೇಲೆ ಪಾರ್ಕಿಂಗ್ ಮಾಡುವುದನ್ನು ನಿಲ್ಲಿಸಬೇಕು
- - ಸಂಚಾರ ದಟ್ಟಣೆ ಜಾಸ್ತಿ ಇರುವಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು
- - ಪರ್ಯಾಯ ರಸ್ತೆ ಇರುವ ಬಗ್ಗೆ ಮಾಹಿತಿ ನೀಡುವ ಫಲಕ ಹಾಕಬೇಕು
- - ಗುತ್ತಿಗೆ ದಾರರು ಸರಿಯಾದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು
- - ರಸ್ತೆ ಕಾಮಗಾರಿ ಮಾಡುವ ಸಿಬ್ಬಂದಿಗಳು ರಿಪ್ಲೆಕ್ಟರ್ ಜಾಕೆಟ್ ಹಾಕಿ ಕೆಲಸ ಮಾಡಬೇಕು, ಅಗತ್ಯ ಬಿದ್ದಲ್ಲಿ ಸುಗಮ ಸಂಚಾರಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಬೇಕು.