ಮಂಗಳೂರು,ಜೂ 04(DaijiworldNews/MS): ಕಳೆದ ಕೆಲವು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮತ್ತೆ ಕಮಲ ಕಮಾಲ್ ಮಾಡಿದೆ. ಕಳೆದ 8 ಚುನಾವಣೆಗಳಲ್ಲಿ ಗೆಲುವಿನ ಪತಾಕೆ ಹಾರಿಸಿರುವ ಬಿಜೆಪಿಯೂ ಈ ಬಾರಿಯೂ ಗೆಲುವಿನ ನಗೆ ಬೀರಿದೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ಅವರನ್ನು ಸೋಲಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಈ ಬಾರಿಯಾದರೂ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಪಣತೊಟ್ಟಿತ್ತು. ಹೀಗಾಗಿ ಈ ಬಾರಿ ಬಿಜೆಪಿಯೂ ಕಾಂಗ್ರೆಸ್ನಿಂದ ಪ್ರಬಲ ಸ್ಪರ್ಧೆಯನ್ನು ಎದುರಿಸಿತ್ತು. ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ರೋ ವರ್ಕೌಟ್ ಆಗಿದ್ದು ಬ್ರಿಜೇಶ್ ಗೆಲುವು ಸಾಧಿಸುವುದರ ಮೂಲಕ ದೆಹಲಿಗೆ ಹಾರಲು ತಯಾರಾಗಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಹೊಸ ಮುಖವಾಗಿ ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತ್ತು. ಆದರೆ ಅವರಿಂದಲೂ ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಒಡ್ಡಲು ಸಾಧ್ಯವಾಗಿರಲಿಲ್ಲ. ಆ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ 7,74,285 ಮತ ಗಳಿಸಿದರೆ, ಮಿಥುನ್ ರೈ 4,99,664 ಮತಗಳಿಸಿ 2,74,621 ಮತಗಳ ಭಾರೀ ಅಂತರದಿಂದ ಸೋಲು ಕಂಡಿದ್ದರು.