ಮಂಗಳೂರು, ಜೂ. 04(DaijiworldNews/AA): ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವಿಎಂ ಮತ ಎಣಿಕೆಯು ಅಧಿಕಾರಿಗಳ ನೇತೃತ್ವದಲ್ಲಿ ಆರಂಭಗೊಂಡಿದ್ದು, ಉಭಯ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಇವಿಎಂ ಮತ ಎಣಿಕೆಯಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ ಅವರು 18,181 ಮತಗಳನ್ನು, ಕಾಂಗ್ರೆಸ್ ನ ಪದ್ಮರಾಜ್ ಅವರು 10,591 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಬ್ರಿಜೇಶ್ ಚೌಟ ಅವರು 7,582 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇನ್ನು 342 ಅಷ್ಟು ನೋಟಾ ಮತ ಚಲಾವಣೆಯಾಗಿದೆ.
ಇನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 23,378 ಮತಗಳನ್ನು ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ 12,560 ಗಳಿಸಿದ್ದಾರೆ. ಈ ಮೂಲಕ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು 9,818 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇನ್ನು 102 ಅಷ್ಟು ನೋಟಾ ಮತ ಚಲಾವಣೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14,09,653 ಇವಿಎಂ ಮತಗಳ ಎಣಿಕೆ ಮಾಡಲಾಗುತ್ತದೆ. ಎಂಟು ವಿಧಾನ ಸಭಾ ಕ್ಷೇತ್ರದ 136 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ವಿಧಾನ ಸಭಾ ಕ್ಷೇತ್ರದ 18 ರಿಂದ 19 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಇವಿಎಂ ಮತ ಎಣಿಕೆ 8 ಕೊಠಡಿಯಲ್ಲಿ 112 ಟೇಬಲ್ ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 554 ಸಿಬ್ಬಂದಿಗಳು ಮತ ಎಣಿಕೆ ನಡೆಸಲಿದ್ದಾರೆ.