ಉಡುಪಿ, ಜೂ. 04(DaijiworldNews/AA): ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಎಣಿಕೆ ಕಾರ್ಯ ನಡೆಯಲಿದೆ.
ಈ ಎಣಿಕೆ ಕೇಂದ್ರದಲ್ಲಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಆರಂಭ ಆಗಲಿರುವ ಮತ ಎಣಿಕೆಗೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂಧೋಬಸ್ತ್ ಏರ್ಪಡಿಸಲಾಗಿದ್ದು, ಅನುಮತಿ ಇಲ್ಲದೇ ಎಣಿಕೆ ಕೇಂದ್ರದ ಬಳಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕೇಂದ್ರದಿಂದ 100 ಮೀಟರ್ ಅಂತರದಲ್ಲಿ ಪೊಲೀಸ್ ಬ್ಯಾರಿ ಕೇಡ್ ಹಾಕಲಾಗಿದೆ.
ಉಡುಪಿ ನಗರದಲ್ಲಿ ವಾಹನ ಸಂಚಾರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ಜೊತೆಗೆ ಎಣಿಕೆ ಕೇಂದ್ರಕ್ಕೆ 3 ಸುತ್ತಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದ್ದು, ಭದ್ರತೆಗಾಗಿ 350 ಪೊಲೀಸ್, ಒಂದು ಕೆ ಎಸ್ ಆರ್ ಪಿ ತುಕಡಿ ನಿಯೋಜನೆಗೊಳಿಸಲಾಗಿದೆ. ಇನ್ನು ಜಿಲ್ಲೆಯಾದ್ಯಂತ ಸೂಕ್ಷ್ಮ ಸ್ಥಳಗಳಲ್ಲಿ ಸುಮಾರು 400ಕ್ಕೂ ಮಿಕ್ಕಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 3 ಕೆ ಎಸ್ ಆರ್ ಪಿ ತುಕಡಿ, 3 ಡಿ ಎ ಆರ್ ನಿಯೋಜನೆ ಮಾಡಲಾಗಿದೆ.