ಬಂಟ್ವಾಳ, ಜೂ. 03(DaijiworldNews/AK): ಇಂದು ಸುರಿದ ವ್ಯಾಪಕ ಮಳೆಗೆ ತಾಲೂಕಿನ ಅನೇಕ ಕಡೆ ಹಾನಿ ಸಂಭವಿಸಿದ್ದು, ಕೊಡಂಬೆಟ್ಟು ಗ್ರಾಮದಲ್ಲಿತೋಟದಲ್ಲಿ ಹುಲ್ಲು ಕೊಯ್ಯಲು ಹೋಗಿದ್ದ ಮೂವರು ಮಹಿಳೆಯರು ಸಿಡಿಲು ಬಡಿದ ಗಾಯಗೊಂಡಿದ್ದಾರೆ.
ಇಲ್ಲಿನ ಸುಬ್ಬೊಟ್ಟು ನಿವಾಸಿಯಾದ ಅನಿತಾ ಪೂಜಾರಿ(38) ಮತ್ತು ರಾಮಯ್ಯ ಗುರಿ ನಿವಾಸಿ ಸಹೋದರಿಯರಾದ ಲೀಲಾವತಿ(32) ಹಾಗೂ ಮೋಹಿನಿ(30) ಗಾಯಗೊಂಡವರು.ಇವರು ಸಹಿತ ಒಟ್ಟು ಏಳುಮಂದಿ ಮಹಿಳೆಯರು ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಮೂವರಿಗೆ ಗಾಯಗಳಾಗಿದೆ. ತಕ್ಷಣವೇ ಇವರನ್ನು 108 ಅಂಬ್ಯುಲೆನ್ಸ್ ನೆರವಿನಲ್ಲಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಉಳಿದಂತೆ ಇರ್ವತ್ತೂರು ಗ್ರಾಮದ ಕುಲಾಲ್ ಎಂಬಲ್ಲಿರುವ ಜೈ ಲಕ್ಷ್ಮಿ ಅವರ ಅಡಿಕೆ ತೋಟ ಹಾಗೂ ತೆಂಗಿನ ಮರಗಳಿಗೆ ಗಾಳಿ ಮಳೆಯಿದ ಹಾನಿಯಾಗಿದೆ. ಇದೇ ಗ್ರಾಮದ ಪ್ರೇಮಲತಾ ಎಂಬವರ ವಾಸ್ತವ್ಯದ ಮನೆಗೆ ತೆಂಗಿನ ಮರಬಿದ್ದು ಹಾನಿ ಸಂಭವಿಸಿದೆ.
ವಾಮದಪದವು ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ನಿವಾಸಿಗಳಾದ ಶೋಭಾ ಹಾಗೂ ಅಪ್ಪಿ ಎಂಬವರ ಮನೆಗಳಿಗೆ ಸಿಡಿಲು ಬಡಿದು ಹಾನಿಯಾಗಿದೆ. ಎರಡೂ ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು, ವಿದ್ಯುತ್ ಸ್ವಿಚ್ ಹಾಗೂ ವಿದ್ಯುತ್ ವಯರಿಂಗ್ ಗಳಿಗೆ ಹಾನಿಯಾಗಿದ್ದು ಅಪಾರ ನಷ್ಟವಾಗಿದೆ. ಕಂದಾಯ ಇಲಾಕೆ ವತಿಯಿಂದ ತುರ್ತು ಕ್ರಮಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ