ಮಂಗಳೂರು, ಜೂ. 03(DaijiworldNews/AA): ನಾನು ಪ್ರಚಾರದ ಹಿಂದೆ ಹೋದವ ಅಲ್ಲ, ನನ್ನ ಕಾರ್ಯವನ್ನ ಗುರುತಿಸಬೇಕು. ಸಾಮಾಜಿಕ ತಾಣಗಳಲ್ಲಿ ನನ್ನ ಬಗ್ಗೆ ಬಹಳ ಚರ್ಚೆಯಾಯ್ತು. ಆದರೆ ನನ್ನ ಕಾರ್ಯಗಳ ಬಗ್ಗೆ ನನ್ನ ಬಳಿ ಅಧಿಕೃತ ಸರ್ಕಾರಿ ಅಂಕಿ ಅಂಶಗಳಿವೆ. ಅಭಿವೃದ್ಧಿ ಆಗಿಲ್ಲ ಅನ್ನೋ ಚರ್ಚೆಗೆ ನಾನು ಉತ್ತರ ಕೊಡಲು ಹೋಗಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪಂಪ್ ವೆಲ್, ನಂತೂರು ವಿಚಾರಗಳು ನ್ಯಾಯಾಲಯದಲ್ಲಿದ್ದ ಸಮಸ್ಯೆಗಳು. ಈ ವಿಚಾರದಲ್ಲಿ ನಾನು ಮಾತನಾಡಲು ಆಗಲ್ಲ, ಹಾಗಾಗಿ ಸುಮ್ಮನಿದ್ದೆ. ಸಾಮಾನ್ಯ ಕಾರ್ಯಕರ್ತನಾದ ನಾನು ನನ್ನ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರ್ಶ ಗ್ರಾಮದಲ್ಲಿ ನಮ್ಮ ಜಿಲ್ಲೆ ಇಡೀ ದೇಶಕ್ಕೆ ಮಾದರಿ ಆಗಿದೆ. ನಾನು ಮೊದಲ ಬಾರಿ ಎಂಪಿ ಆದಾಗ ಕರೆದು ಟಿಕೆಟ್ ಕೊಟ್ಟರು. ಬೇಡ ಅಂತ ನಾಲ್ಕು ದಿನ ಮೊಬೈಲ್ ಆಫ್ ಮಾಡಿ ಹೋಗಿದ್ದೆ. ಆದರೆ ಆ ಬಳಿಕ ನಾನು ಸಂಘದ ತೀರ್ಮಾನಕ್ಕೆ ಬದ್ದನಾಗಿ ಒಪ್ಪಿಕೊಂಡೆ. ಈಗ ಸಂಘ ಸಾಕು ಅಂದಾಗ ಒಪ್ಪಿಕೊಂಡಿದ್ದೇನೆ. ನಾನು ರಾಜಕೀಯವಾಗಿ ಇದ್ದವನಲ್ಲ, ಸಂಘದ ಪ್ರಚಾರಕ್ಕೆ ಮನೆ ಬಿಟ್ಟವ. ಇಂಥ ಜವಾಬ್ದಾರಿ ಕೊಡಿ ಅಂತ ನಾನು ಯಾವತ್ತೂ ಕೇಳಲೇ ಇಲ್ಲ. ನಾನು ಪಕ್ಷದ ತೀರ್ಮಾನಕ್ಕೆ ಸಾಯುವವರೆಗೆ ಬದ್ಧ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ಹುದ್ದೆಗೂ ನನಗೆ ರಾತ್ರಿ 2 ಗಂಟೆಗೆ ಅಮಿತ್ ಶಾ ಕರೆ ಮಾಡಿ ಹೇಳಿದ್ರು. ಒಂದು ದಿನ ಬಂದು ಮಾತನಾಡ್ತೇನೆ ಅಂದಾಗಲೂ ಒಪ್ಪದೇ ಪಕ್ಷದ ತೀರ್ಮಾನ ಅಂದ್ರು. ಪಕ್ಷ ಬೆಳೆದಾಗ ನಾವು ಅವಕಾಶಕ್ಕಾಗಿ ಕಾಯಲೇ ಬೇಕು. ಸಾಮಾಜಿಕ ನ್ಯಾಯ, ಚರ್ಚೆಗಳು ಬಂದಾಗ ಒತ್ತಡಗಳು ಇರುತ್ತೆ. ನಾನು ರಾಜ್ಯಾಧ್ಯಕ್ಷನಾಗಿದ್ದಾಗಲೂ ನನಗೆ ಎಲ್ಲರಿಗೆ ಟಿಕೆಟ್ ಕೊಡಿಸಲು ಆಗಿಲ್ಲ. ಅದರೆ ಸಿದ್ದಾಂತ, ತತ್ವ ಅನ್ನೋದು ನಮ್ಮ ಹೃದಯದಲ್ಲಿ ಇರಬೇಕು. ಮುಂದಿನ ಬಿಜೆಪಿ ಸಂಸದರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವುದೇ ಸಂಧರ್ಭದಲ್ಲಿ ನಾನು ಯಾರೇ ಎಂಪಿ ಆದ್ರೂ ಸಹಕಾರ ಕೊಡ್ತೇನೆ. ನಾನು ಧಾರ್ಮಿಕ ಕ್ಷೇತ್ರದಿಂದ ಬಂದವ, ದಾಸರ ವಾಣಿಯಂತೆ ನಿಂದಕರಿರಬೇಕು. ಆದರೆ ನಿಂದನೆಯಲ್ಲಿ ವೈಯಕ್ತಿಕ ದ್ವೇಷ ಇರಬಾರದು. ಒಬ್ಬ ಪರ್ಮನೆಂಟ್ ಆಗಿ ಬೈತಾ ಇದಾನೆ ಅಂದ್ರೆ ಅವನಿಗೆ ವೈಯಕ್ತಿಕ ದ್ವೇಷ ಇರಬೇಕು. ಅಂಥದ್ದನ್ನ ನಾನು ಆದಷ್ಟು ತಲೆಗೆ ತೆಗೆದುಕೊಂಡಿಲ್ಲ. ಪಂಪ್ ವೆಲ್ ವಿಚಾರದಲ್ಲಿ ಕೆಲವರು ಒಳ್ಳೆಯ ನಿಂದನೆ ಮಾಡಿದ್ದಾರೆ, ಸ್ವೀಕರಿಸಿದ್ದೇನೆ. ಇನ್ನು ಕೆಲವರು ವೈಯಕ್ತಿಕವಾಗಿ ಮಾಡಿದ್ದಾರೆ, ಅಂಥವರನ್ನ ನಾನು ತಿರಸ್ಕಾರ ಮಾಡಿದ್ದೇನೆ ಎಂದರು.
ನಂತೂರು ಮೇಲ್ಸೇತುವೆ ಕಾಮಗಾರಿ ಕುರಿತು ಪ್ರತಿಕ್ರಿಯಿಸಿದ ಅವರು, ನಂತೂರು ಕೆಪಿಟಿ ಮೇಲ್ಸೇತುವೆ ಕಾಮಗಾರಿಗೆ 343 ಕೋಟಿ ರೂಪಾಯಿ ಟೆಂಡರ್ ಆಗಿದೆ. ಆದರೆ ಕೆಲವೊಂದು ಸಮಸ್ಯೆಗಳಿಂದ ಕಾಮಗಾರಿ ಆರಂಭ ಆಗಿಲ್ಲ. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಜಿಲ್ಲೆಗೆ ಬಂದಿದ್ದಾರೆ. ಹಾಗೆ ಕೆಪಿಟಿ ಮೇಲ್ಸೇತುವೆಗೆ ಅನುದಾನ ಬಿಡುಗಡೆ ಆಗಿ ಟೆಂಡರ್ ಆಗಿದೆ. ಆದರೆ ಕೆಪಿಟಿ ಅರಣ್ಯ ವಿಚಾರವಾಗಿ ಗೊಂದಲವಿತ್ತು. ಅಲ್ಲಿನ ಮೇಲ್ಸೇತುವೆ ಡಿಸೈನ್ ಬದಲಾವಣೆಗೆ ಬೇಡಿಕೆ ಇತ್ತು. ಇದರಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಈಗಾ ಎಲ್ಲಾ ಸಮಸ್ಯೆ ಪರಿಹಾರ ಆಗಿದ್ದು, ೨ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ನಂತೂರಿನ ಮೇಲ್ಸೇತುವೆ ಕಾಮಗಾರಿ ಭಾರಿ ಗೊಂದಲ್ಲಿತ್ತು. ಕಾಮಗಾರಿಗೆ ತುಂಬಾ ಅಡಚಣೆ ಇತ್ತು. ಆದರೆ ಈಗಾ ಅದು ಸರಿಯಾಗಿದೆ. ಸ್ಥಳೀಯ ನಿವಾಸಿಗಳಿಗೆ ಸ್ವಲ್ಪ ಕಾಲಾವಕಾಶ ನೀಡಲಾಗಿದ್ದು, ಕೆಲ ಮನೆ ತೆರವು ಕೋರ್ಟ್ ಕೇಸ್ ಇತ್ತು. ಈಗ ಎಲ್ಲ ಸರಿ ಆಗಿದ್ದು, ಶೀಘ್ರವಾಗಿ ಕಾಮಗಾರಿ ಆರಂಭ ಆಗಲಿದೆ ಎಂದು ಮಾಹಿತಿ ನೀಡಿದರು.
ಲೋಕಸಭಾ ಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ವಿಚಾರವಾಗಿ ಮಾತನಾಡಿದ ಅವರು, ಮೊದಲು ಎಂಪಿ ಆದಾಗ ನಾನು ಸಂಘಟನೆಯ ಕಾರ್ಯದರ್ಶಿ ಆಗಿದ್ದೆ. ಆ ಸಂದರ್ಭದಲ್ಲಿ ಹೇಳಿದ್ದೆ ನೀವು ವಾಪಾಸ್ಸು ಹೋಗು ಎಂದಾಗ ಹೋಗ್ತೆನೆ. ಈಗ ಹದಿನೈದು ವರ್ಷದ ಬಳಿಕ ಹೋಗಲು ಹೇಳಿದ್ದಾರೆ ಬಂದಿದ್ದೇನೆ. ಇನ್ನು ಕೋವಿಡ್ ಸಂಧರ್ಭದಲ್ಲಿ ಮಂಗಳೂರು ವೆಲ್ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇತ್ತು. ಕೇವಲ 13 ವೆಂಟಿಲೇಟರ್ ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಯಲ್ಲಿತ್ತು. ಈ ಸಂಧರ್ಭದಲ್ಲಿ 2 ಕೋಟಿ ರೂಪಾಯಿಯನ್ನು ಅನುದಾನದಲ್ಲಿ ನೀಡಿದ್ದೆ ಎಂದರು.
ಚಾರ್ಮಡಿ ಘಾಟ್ ಗೆ 300 ಕೋಟಿ, ಶಿರಡಿ ಘಾಟ್ ಗೆ 1,100 ಕೋಟಿ, ಟನ್ ಯೋಜನೆಗೆ ೨೫೦೦ ಸಾವಿರ ಕೋಟಿ, ಸುರಂಗ ಮಾರ್ಗ ಮತ್ತು ಫ್ಲೈ ಓವರ್ ಮೂಲಕ ಯೋಜನೆ ರೂಪಿಸಲಾಗಿದೆ. ಜನರಿಗೆ ಅಭಿವೃದ್ಧಿ ಆಗಬೇಕು ಆಶಯ ಇದೆ. ಆದರೆ ಈ ವೇಳೆ ತಡೆಯೂ ತುಂಬಾ ಇದೆ. ಬಿಕರ್ನಕಟ್ಟೆ ಸಣೂರು ಯೋಜನೆ ನನ್ನ ಅವಧಿಯಲ್ಲಿ ಆಗಬೇಕೆಂದಿತ್ತು. ಆದ್ರೆ ಕೆಲವೊಂದು ಅಡೆಟಡೆಯಿಂದ ಅದು ಆಗಿಲ್ಲ. ಸ್ಮಾರ್ಟ್ ಸಿಟಿ ವೇಗವಾಗಿದೆ ಆದ್ರೆ ಸ್ಟೇ ಇಂದು ಹಿಂದೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಬಾರಿ ಹೇಳಿಕೆ ಬಂತು. 1 ಲಕ್ಷ 80 ಸಾವಿರ ಕೋಟಿ ಯೋಜನೆ ಕಾಮಗಾರಿ ಆಗಿದೆ. 15 ವರ್ಷದಲ್ಲಿ ನಾನು ಮಾಡಿದ ಯೋಜನೆ ಎಂದು ಹೆಮ್ಮೆಯಿಂದ ಹೇಳ ಬಲ್ಲೆ. ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿ ಆಗಿಲ್ಲ ಎಂದ್ರು. ಆದ್ರೆ ನಾನು ಯಾವುದಕ್ಕೂ ಉತ್ತರ ಕೊಟಿಲ್ಲ. ಪಂಪ್ವೆಲ್, ಕೆಪಿಟಿ ಯೋಜನೆಗೆ ಅಡಚಣೆ ತುಂಬಾ ಇತ್ತು ಹೇಳಿದರು.