ಉಡುಪಿ, ಜೂ. 03(DaijiworldNews/AA): ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ವೇಳೆ ಕಾಪು ಮತಗಟ್ಟೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಪ್ರಮುಖ ರಾಜಕೀಯ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮತದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮತದಾರರ ಗಮನ ಸೆಳೆಯಲು ಯತ್ನಿಸಿದ್ದು, ಎರಡು ಗುಂಪುಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜೊತೆಗೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಇನ್ನು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಕಾಪು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿದ್ದು, ಮತಗಟ್ಟೆಯಲ್ಲಿ ಸುವ್ಯವಸ್ಥೆ ಪುನಃಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಸ್ವಲ್ಪ ಸಮಯದ ಮತಗಟ್ಟೆ ಬಳಿ ಕೆಲ ಕಾಲ ಅಶಾಂತಿ ಉಂಟಾಗಿತ್ತು. ಆದರೆ ಪೊಲೀಸರು ಮಧ್ಯಪ್ರವೇಶಿಸಿದ ಕಾರಣ ಚುನಾವಣಾ ಪ್ರಕ್ರಿಯೆಯು ನಂತರ ಸುಗಮವಾಗಿ ಮುಂದುವರೆಯಿತು.