ಮಂಗಳೂರು, ಜೂ. 03(DaijiworldNews/AA): ಇಂದು ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯು ನಡೆಯುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭಗೊAಡಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಸಹಾಯಕ ಆಯುಕ್ತ ಹರ್ಷವರ್ಧನ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆಯಲ್ಲಿ ಮತ ಚಲಾಯಿಸಿದರು. ಇನ್ನು ಶಾಸಕ ವೇದವ್ಯಾಸ್ ಕಾಮತ್ ಕೂಡ ಮತ ಚಲಾಯಿಸಿರುತ್ತಾರೆ.
ದ.ಕ. ಜಿಲ್ಲೆಯಲ್ಲಿ ಪದವೀಧರರ ಕ್ಷೇತ್ರದಲ್ಲಿ 24 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಎಲ್ಲ ತಾಲೂಕು ಕಚೇರಿಗಳಲ್ಲಿ ಸೇರಿ 16 ಕಡೆಗಳಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ದ.ಕ. ಜಿಲ್ಲೆಯ ಪಧವೀಧರ ಕ್ಷೇತ್ರದಲ್ಲಿ 8,375 ಪುರುಷ ಹಾಗೂ 11,596 ಮಹಿಳೆ ಸಹಿತ ಒಟ್ಟು 19,971 ಮತದಾರರು ಇದ್ದಾರೆ. ಇನ್ನು ಶಿಕ್ಷಕ ಕ್ಷೇತ್ರದಲ್ಲಿ 2,650 ಪುರುಷ ಹಾಗೂ 5,539 ಮಹಿಳೆ ಸೇರಿದಂತೆ ಒಟ್ಟು 9,189 ಮತದಾರರು ಇದ್ದಾರೆ.
ಉಡುಪಿ ಜಿಲ್ಲೆಯಲ್ಲಿ 10 ಕಡೆಗಳಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಪದವೀಧರರ ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯಲ್ಲಿ 7,857 ಪುರುಷರು ಮತ್ತು 9,176 ಮಹಿಳೆಯರು ಸಹಿತ ಒಟ್ಟು 17,033 ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ 1,717 ಪುರುಷರು ಹಾಗೂ 2,350 ಮಹಿಳೆಯರು ಸೇರಿ ಒಟ್ಟು 4,067 ಮತದಾರರಿದ್ದಾರೆ.
ಕಾಂಗ್ರೆಸ್ ಹಾಗು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಈ ಪರಿಷತ್ ಚುನಾವಣೆಯು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪದವೀಧರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು, ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇನ್ನು ಇದರೊಂದಿಗೆ ಈ ಬಾರಿ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯು ಭಾರೀ ಕೆರಳಿದ ಕುತೂಹಲ ಕೆರಳಿಸಿದೆ.