ಮಂಗಳೂರು, ಜೂ. 02(DaijiworldNews/AK): ಕವಿತ ಟ್ರಸ್ಟ್ ಹಾಗೂ ದಾಯ್ಜಿ ದುಬಾಯ್ ಮಂಗಳೂರು ಘಟಕದ ವತಿಯಿಂದ ಖ್ಯಾತ ಕೊಂಕಣಿ ಬರಹಗಾರ ದಿವಂಗತ ಸಿಜ್ಯೆಸ್ ತಾಕೊಡೆಯವರನ್ನು ಸ್ಮರಿಸುವ ’ಉತ್ರಾಂ ನಮಾನ್’ ಎಂಬ ಕಾರ್ಯಕ್ರಮವು ಮಂಗಳೂರಿನ ಡಾನ್ ಬೊಸ್ಕೊ ಸಭಾಭವನದಲ್ಲಿ ನಡೆಯಿತು.
\
ಕೊಂಕಣಿ ಭಾಷೆಯ ಕಾವ್ಯ ಹಾಗೂ ಹಾಸ್ಯ ಸಾಹಿತ್ಯಕ್ಕೆ ಸಿಜ್ಯೆಸ್ ತಾಕೊಡೆ ನೀಡಿದ ದೇಣಿಗೆಯನ್ನು ಸ್ಮರಿಸಿ ಅವರ ಸಾಹಿತ್ಯವನ್ನು ನಿರಂತರ ಚಲಾವಣೆಯಲ್ಲಿಡಲು ಕವಿತಾ ಟ್ರಸ್ಟ್ ’ಉತ್ರಾಂ ನಮಾನ್’ ಕಾರ್ಯಕ್ರಮಕ್ಕೆ ಮುಂದಾಗಿದ್ದು, ಸಿಜ್ಯೆಸ್ ಅವರು ಸೇವೆ ಸಲ್ಲಿಸಿದ ದಾಯ್ಜಿ ದುಬಾಯ್ ಸಂಘಟನೆಯೂ ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದು ಸಂತಸದ ವಿಚಾರ ಎಂದು ಸಭಿಕರನ್ನು ಸ್ವಾಗತಿಸಿ ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೂ ಬಾರ್ಕೂರ್ ತಮ್ಮ ಪ್ರಾಸ್ತವಿಕ ಭಾಷಣಲ್ಲಿ ಉಲ್ಲೇಖಿಸಿದರು.
ಕೊಂಕಣಿ ಸಾಹಿತಿಗಳಾದ ಅಂಡ್ರು ಎಲ್ ಡಿ ಕುನ್ಹಾ , ಸಿಜ್ಯೆಸ್ ತಾಕೊಡೆ ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆ, ಟೈಟಸ್ ನೊರೋನ್ಹಾ ಸಿಜ್ಯೆಸ್ ಅವರ ಸಾಹಿತ್ಯ ಜೀವನವನ್ನು ಸಭಿಕರ ಮುಂದೆ ಪ್ರಸ್ತುತಪಡಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕವಿ, ಸಾಹಿತಿ ಮೆಲ್ವಿನ್ ರೊಡ್ರಿಗಸ್ ಅವರು ಸಿಜ್ಯೆಸ್ ಅವರ ಕವಿತೆಗಳನ್ನು ಉಲ್ಲೇಖಿಸಿ ಸಿಜ್ಯೆಸ್ ಅವರ ಸಾಹಿತ್ಯ ರಚನಾ ಶೈಲಿ ಹಾಗೂ ಸಮಾಜ ಗ್ರಹಣ ಪ್ರತಿಭೆಯನ್ನು ಸ್ಮರಿಸಿದರು.
ಸಭಾ ಕಾರ್ಯಕ್ರಮದ ನಂತರ ಸಿಜ್ಯೆಸ್ ಅವರ ಕವಿತೆಗಳ ವಾಚನ ನಡೆಯಿತು. ಸಿಜ್ಯೆಸ್ ಅವರ ಧರ್ಮಪತ್ನಿ ಸಿಲ್ವಿಯಾ ಸಿಕ್ವೇರಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಾಯ್ಜಿ ದುಬಾಯ್ ಘಟಕಾಧ್ಯಕ್ಷ ಪ್ರವೀಣ್ ತಾವ್ರೊ ಧನ್ಯವಾದ ಸಮರ್ಪಣೆಗೈದರು. ಸ್ಟ್ಯಾನಿ ಬೇಳ ಹಾಗೂ ಮನೋಜ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು