ಮಂಗಳೂರು, ಮೇ 09 (Daijiworld News/MSP): ಕಡಲತಡಿಯ ನಗರ ಮಂಗಳೂರಿಗೆ ವಿದೇಶಿ ಪ್ರವಾಸಿಗರ ದಂಡೇ ಹರಿದು ಬಂದಿದೆ. ಹೌದು, ಎನ್ಎಂಪಿಟಿಗೆ ದೂರದ ಮಾರ್ಷೆಲ್ ಐರ್ಲ್ಯಾಂಡ್ನಿಂದ ಐಷಾರಾಮಿ ಪ್ರವಾಸಿ ಕ್ರೋಸ್ ಹಡಗು ಆಗಮಿಸಿವೆ.
ಕಡಲನಗರಿಗೆ ಐಷಾರಾಮಿ ಹಡಗುಗಳ ಮೂಲಕ ವಿದೇಶಿ ಪ್ರವಾಸಿಗರ ಆಗಮನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಂಗಳವಾರ ಆಗಮಿಸಿದ ಹಡಗಿನಲ್ಲಿ 650 ಪ್ರವಾಸಿಗರು ಹಾಗೂ 400 ಸಿಬಂದಿಯನ್ನೊಳಗೊಂಡಿದ್ದಾರೆ
ವಿದೇಶೀ ಪ್ರವಾಸಿಗರು ಒಂದು ದಿನ ಜಿಲ್ಲೆಯಲ್ಲಿರುವ ಗತಕಾಲದ ಇತಿಹಾಸ ಸಾರುವ ಐತಿಹಾಸಿಕ ಚರ್ಚ್, ದೇವಸ್ಥಾನ ಮುಂತಾದ ಪಾರಂಪರಿಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ವಾಪಸಾಗಿದ್ದಾರೆ. ಕಳೆದ ವರ್ಷ ಒಟ್ಟು 22 ಹಡಗುಗಳಲ್ಲಿ 24,258 ಮಂದಿ ಪ್ರವಾಸಿಗರು ಮಂಗಳೂರಿಗೆ ಆಗಮಿಸಿದ್ದರು. ಈ ವರ್ಷದಲ್ಲಿ ಮೇ ಮೊದಲ ವಾರದವರೆಗೆ ಸುಮಾರು 18 ಕ್ಕೂ ಅಧಿಕ ಪ್ರವಾಸಿ ಹಡಗುಗಳು ಮಂಗಳೂರಿಗೆ ಆಗಮಿಸಿವೆ.
2016ರಲ್ಲಿ ಕೇಂದ್ರ ಸರಕಾರ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ವೀಸಾ ನೀಡುವ ಪ್ರಕ್ರಿಯೆ ಸರಳಗೊಳಿಸಿ ಬಂದರುಗಳಲ್ಲಿ ಇ-ವೀಸಾ ವ್ಯವಸ್ಥೆ ಮಾಡಿದ ನಂತರ ಮಂಗಳೂರಿಗೆ ಪ್ರವಾಸಿ ಹಡಗುಗಳ ಸಂಖ್ಯೆ ಅಧಿಕವಾಗಿದೆ ಎಂದು ಎನ್ಎಂಪಿಟಿ ಮೂಲಗಳು ತಿಳಿಸಿವೆ.