ಮಂಗಳೂರು, ಜೂ. 02(DaijiworldNews/AA): ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿಷಯದಲ್ಲಿ ಪೊಲೀಸರು ಮೃದು ಧೋರಣೆ ತಾಳಬಾರದಿತ್ತು. ರಾಜಕಾರಣದಲ್ಲಿದ್ದವರು ಕಾನೂನಿಗೆ ಗೌರವ ಕೊಡಬೇಕು, ನಾವೇ ಗೌರವ ಕೊಡೋದಿಲ್ಲ ಅಂದ್ರೆ ಜನಸಾಮಾನ್ಯರು ಏನಂತಾರೆ ಅನ್ನುವ ಪ್ರಶ್ನೆ ಬರುತ್ತದೆ. ಮೊನ್ನೆಯ ಪ್ರಕರಣದಲ್ಲಿ ಪೊಲೀಸರು ಹರೀಶ್ ಪೂಂಜಾರನ್ನು ಬಂಧನ ಮಾಡಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂಂಜಾ ವಿಚಾರದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಏನು ಹೇಳಿದ್ದಾರೆ ಅಂತ ನಾವೆಲ್ಲ ನೋಡಿದ್ದೇವೆ. ಶಾಸಕಾಂಗದಲ್ಲಿದ್ದವರು ಅವರ ಕೆಲಸ ಏನು, ಅದನ್ನು ಮಾಡಬೇಕು ಹೊರತಾಗಿ ಕಾರ್ಯಾಂಗದ ಕೆಲಸಕ್ಕೆ ಕೈಹಾಕಬಾರದು. ಆ ಪ್ರಕರಣದ ಗಂಭೀರತೆಯನ್ನು ನಾವು ನೋಡಬೇಕಾಗುತ್ತದೆ. ಅವರು ಒಬ್ಬ ಪೊಲೀಸ್ ಅಧಿಕಾರಿ ಬಗ್ಗೆ ಹೇಳಿದ್ದು, ಯಾರೋ ಜನಸಾಮಾನ್ಯನ ಬಗ್ಗೆ ಅಲ್ಲ. ಪೊಲೀಸರ ಕಾಲರ್ ಹಿಡೀತೇವೇ ಎಂದಿದ್ದರು. ಇವರು ಕಾಲರ್ ಹಿಡಿಯಬೇಕಿದ್ದರೆ, ಪೊಲೀಸರು ಕೋಳ ಹಿಡಿದುಕೊಂಡಿರ್ತಾರೆ ಅನ್ನುವ ಸಾಮಾನ್ಯ ಜ್ಞಾನ ಬೇಕಲ್ವಾ ಎಂದು ಹರೀಶ್ ಪೂಂಜಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾವೆಲ್ಲ ಪಕ್ಷದ ಆಶ್ರಯದಲ್ಲಿ ಶಾಸಕರಾಗಿ ಬಂದವರು, ವೈಯಕ್ತಿಕ ನೆಲೆಯಲ್ಲಿ ಗೆದ್ದು ಬರುವ ಶಕ್ತಿ ಇರಲ್ಲ. ಇಡೀ ದೇಶದಲ್ಲಿ ಒಂದಿಬ್ಬರಿಗೆ ಮಾತ್ರ ಅಂತಹ ಶಕ್ತಿ ಇದೆ. ವೈಯಕ್ತಿಕವಾಗಿ ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು ಎಂದು ತಿಳಿಸಿದರು.
ಕಂಕನಾಡಿ ಮಸೀದಿ ಪಕ್ಕದಲ್ಲಿ ನಮಾಜ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸುಮೋಟೊ ಕೇಸ್ ಹಾಕುವ ಅಗತ್ಯ ಇರಲಿಲ್ಲ. ಮಸೀದಿ ಕಡೆಯವರನ್ನು ಕರೆದು ಮಾತನಾಡಿದ್ದರು. ಹಾಗಿದ್ದ ಮೇಲೆ ಯಾಕೆ ಕೇಸ್ ಮಾಡಬೇಕಿತ್ತು. ಮಸೀದಿ ಫುಲ್ ಆದಾಗ, ಹೊರಗಡೆ ಬಂದು ನಮಾಜ್ ಮಾಡಿದ್ದಾರೆ. ಅದನ್ನು ದೊಡ್ಡದು ಮಾಡುವ ಪ್ರಮೇಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.