ಕುಂದಾಪುರ, ಮೇ 30 (DaijiworldNews/AK): ಅಪ್ರಾಪ್ತೆಯನ್ನು ವಿವಾಹವಾದ ಪ್ರಕರಣದಲ್ಲಿ ಯುವತಿಯ ತಂದೆ ಸಂತೋ಼ಷ್ ಶೆಟ್ಟಿ, ಬಾವ ರಾಜೇಶ್ ಶೆಟ್ಟಿ ಹಾಗೂ ಮದುವೆಯಾದ ವ್ಯಕ್ತಿ ತೊಂಭಟ್ಟು ನಿವಾಸಿ ಭರತ್ ಶೆಟ್ಟಿ(37) ಯ ಸಹಿತ ಮೂವರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತೆ ಬಾಲಕಿಗೆ 17 ವರ್ಷ 8 ತಿಂಗಳಾಗಿದ್ದು, ವಿವಾಹ ಮಾಡಿಕೊಂಡಿರುವ ಆರೋಪಿ ಭರತ್ ಶೆಟ್ಟಿಗೆ 37 ವರ್ಷವಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ತಂದೆ ಸಂತೋಷ್ ಶೆಟ್ಟಿ ಹಾಗೂ ಬಾವ ರಾಜೇಶ್ ಶೆಟ್ಟಿ ಸೇರಿ ಆರೋಪಿ ಭರತ್ ಶೆಟ್ಟಿಯೊಂದಿಗೆ ವಿವಾಹ ಮಾಡಿರುವುದಾಗಿ ತಿಳಿದುಬಂದಿದೆ.
ಬಾಲಕಿಯ ತಂದೆ ಸಂತೋಷ್ ಶೆಟ್ಟಿ ಹಾಗು ಅಕ್ಕನ ಗಂಡ ರಾಜೇಶ್ ಶೆಟ್ಟಿ ಸೇರಿಕೊಂಡು ಆರೋಪಿ ಭರತ್ ಶೆಟ್ಟಿಯ ಜೊತೆ ಹಾಲಾಡಿ ಗ್ರಾಮದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ 21ರಂದು ರಾತ್ರಿ 8 ಗಂಟೆಗೆ ವಿವಾಹ ಮಾಡಿಸಿದ್ದಾರೆನ್ನಲಾಗಿದೆ. ಆದರೆ ಮದುವೆಗೆ ತಾಯಿ ಒಪ್ಪಿಗೆ ಇಲ್ಲದ್ದರಿಂದ ಮದುವೆಯ ಬಳಿಕ ಮಗಳನ್ನು ಮನೆಗೆ ಸೇರಿಸಿಕೊಳ್ಳದ ಕಾರಣ, ಆರೋಪಿ ಭರತ್ ಶೆಟ್ಟಿ ಆಕೆಯನ್ನು ತೊಂಬಟ್ಟಿನ ತನ್ನ ಮನೆಗೆ ಕರೆದೊಯ್ದಿದ್ದ.
ಬಾಲ್ಯ ವಿವಾಹ ನಡೆದಿರುವ ಬಗ್ಗೆ ಕುಂದಾಪುರದ ಸಹಾಯಕ ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ರೂಪಾ ಬಂಗೇರ ಅವರಿಗೆ ದೂರು ಬಂದಿದ್ದು, ಅದರಂತೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ರೂಪಾ ಬಂಗೇರ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಫೊಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.