ಮಂಗಳೂರು, ಮೇ 08(Daijiworld News/SM): ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ 1 ಕೆ.ಜಿ. 470 ಗ್ರಾಂ ಗಾಂಜಾ ಹಾಗೂ 24 ಗಾಂಜಾ ಚಾಕಲೆಟ್ ಗಳನ್ನು ಸಾಗಿಸುತ್ತಿದ್ದ ವೇಳೆ ಬಂಧಿಸಲ್ಪಟ್ಟು ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದು ಇದೀಗ ಆರೋಪಿಗೆ ಶಿಕ್ಷೆ ಪ್ರಕಟಗೊಂಡಿಗೆ.
ನೀಲೇಶ್ವರದ ಎ,ಪಿ.ರೋಡ್ ನಿವಾಸಿ ಅಮಲ್ ದೇವ್ ಪ್ರಕರಣದ ಆರೋಪಿಯಾಗಿದ್ದು, ಆತನ ಕೃತ್ಯ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆತನಿಗೆ ದ. ಕ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಶಿಕ್ಷೆ ಪ್ರಕಟಗೊಂಡಿದೆ. 5 ವರ್ಷಗಳ ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.
ಪ್ರಕರಣದ ವಿವರ:
2013ರಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ 1 ಕೆ.ಜಿ. 470 ಗ್ರಾಂ ಗಾಂಜಾ ಹಾಗೂ 24 ಗಾಂಜಾ ಚಾಕಲೆಟ್ ಗಳನ್ನು ಸಾಗಾಟಕ್ಕೆ ಆರೋಪಿ ಅಮಲ್ ದೇವ್ ಯತ್ನಿಸಿದ್ದ. ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೇಸುವ ವೇಳೆ ಗಾಂಜಾ ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತರಾಗಿದ್ದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಬಜಪೆ ಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆರೋಪಿ ತಲೆ ಮರೆಸಿಕೊಂಡಿದ್ದ.
ಬಳಿಕ ಆರೋಪಿ ಕೇರಳದ ನಿಲೇಶ್ವರದಲ್ಲಿ ಪತ್ತೆಯಾಗಿದ್ದು, ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆತನ ಕೃತ್ಯ ಸಾಬೀತುಪಡಿಸಿದೆ. ಹಾಗೂ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.